Breaking
17 Nov 2026, Tue

ಪುತ್ತೂರು ಶಾಸಕರಿಗೆ ಬಹಿರಂಗ ಚರ್ಚೆಯ ಸವಾಲು: ಅಭಿವೃದ್ಧಿ ಕಾಮಗಾರಿಗಳ ದಾಖಲೆ ಸಮೇತ ಬನ್ನಿ ಎಂದ ಆದೇಶ್ ಶೆಟ್ಟಿ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುದಾನ ಬಳಕೆಯ ಕುರಿತು ಸಾರ್ವಜನಿಕ ವೇದಿಕೆಯಲ್ಲಿ ಮುಖಾಮುಖಿ ಬಹಿರಂಗ ಚರ್ಚೆ ನಡೆಸಲು ಸಿದ್ಧನಿದ್ದೇನೆ. ಶಾಸಕರು ಪ್ರತಿಯೊಂದು ಗ್ರಾಮದ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ದಾಖಲೆಗಳೊಂದಿಗೆ ಚರ್ಚೆಗೆ ಬರಲಿ ಎಂದು ಪುತ್ತೂರು ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆದೇಶ್ ಶೆಟ್ಟಿ ಸವಾಲು ಹಾಕಿದ್ದಾರೆ.

ಶಾಸಕರ ಮನೆಯ ಮುಂಭಾಗದಲ್ಲಿರುವ ಬೆಳ್ಳಿಪ್ಪಾಡಿ ರಸ್ತೆ ಹಾಗೂ ಮನೆಯ ಹಿಂಭಾಗದಲ್ಲಿರುವ ಮಠಂತಬೆಟ್ಟು–ಪೆರ್ನೆ ರಸ್ತೆಗಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳೇನು? ಈ ರಸ್ತೆಗಳಿಗಾಗಿ ಮಂಜೂರಾದ ಅನುದಾನ ಎಷ್ಟು? ಬಿಡುಗಡೆಯಾದ ಮೊತ್ತ ಹಾಗೂ ಕಾಮಗಾರಿಗಳ ಪ್ರಗತಿ ಏನು ಎಂಬುದನ್ನು ಸಾರ್ವಜನಿಕರ ಮುಂದಿಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಎಷ್ಟು ಗ್ರಾಮಗಳಿವೆ ಎಂಬುದರ ಸ್ಪಷ್ಟ ಅರಿವು ಶಾಸಕರಿಗಿದೆಯೇ ಎಂದು ಪ್ರಶ್ನಿಸಿರುವ ಆದೇಶ್ ಶೆಟ್ಟಿ, ಕ್ಷೇತ್ರದ ಪ್ರತಿಯೊಂದು ಗ್ರಾಮದ ಹೆಸರು, ಮಂಜೂರಾದ ಅನುದಾನ, ಬಿಡುಗಡೆಯಾದ ಹಣ, ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಹಾಗೂ ಅವುಗಳ ಪ್ರಸ್ತುತ ಸ್ಥಿತಿಗತಿಯ ಸಂಪೂರ್ಣ ವಿವರಗಳನ್ನು ಅಧಿಕೃತ ದಾಖಲೆಗಳ ಸಮೇತ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಯಾವ ಗ್ರಾಮಕ್ಕೆ ಎಷ್ಟು ಅನುದಾನ ನೀಡಲಾಗಿದೆ? ಯಾವ ಕಾಮಗಾರಿಗೆ ಎಷ್ಟು ಹಣ ಖರ್ಚಾಗಿದೆ? ಎಷ್ಟು ಕಾಮಗಾರಿಗಳು ಪೂರ್ಣಗೊಂಡಿವೆ ಮತ್ತು ಎಷ್ಟು ಕಾಮಗಾರಿಗಳು ಬಾಕಿ ಉಳಿದಿವೆ ಎಂಬುದರ ಕುರಿತು ದಾಖಲೆಗಳ ಆಧಾರದಲ್ಲಿ ಚರ್ಚೆಯಾಗಲಿ ಎಂದಿದ್ದಾರೆ.

ಉಪ್ಪಿನಂಗಡಿ ಭಾಗಕ್ಕೆ ₹345 ಕೋಟಿ ಅನುದಾನ ತಂದಿರುವುದಾಗಿ ವ್ಯಾಪಕ ಪ್ರಚಾರ ನಡೆಸಲಾಗುತ್ತಿದೆ. ಈ ಅನುದಾನದ ಯೋಜನಾವಾರು ವಿವರ, ವೆಚ್ಚ ಹಾಗೂ ಕಾಮಗಾರಿಗಳ ಪ್ರಸ್ತುತ ಸ್ಥಿತಿಯನ್ನು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಶಾಸಕ ಹರೀಶ್ ಪೂಂಜಾ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವ ಮೊದಲು ಪುತ್ತೂರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಲೆಕ್ಕವನ್ನು ಶಾಸಕರು ಜನರ ಮುಂದಿಡಬೇಕು. ಹರೀಶ್ ಪೂಂಜಾ ಅವರ ಅಭಿವೃದ್ಧಿ ಸಾಧನೆಗಳ ಮುಂದೆ ಪುತ್ತೂರು ಶಾಸಕರ ಸಾಧನೆ ಏನೇನೂ ಅಲ್ಲ ಎಂಬುದು ನಮ್ಮ ನಿಲುವು. ಇದನ್ನು ಒಪ್ಪದಿದ್ದರೆ ಎರಡೂ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳು ಹಾಗೂ ಅನುದಾನ ಬಳಕೆಯ ದಾಖಲೆಗಳೊಂದಿಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.

ತಾವು ದಾಖಲೆಗಳೊಂದಿಗೆ ಪ್ರಶ್ನಿಸಲು ಸಿದ್ಧವಿದ್ದು, ಶಾಸಕರು ಪ್ರತಿಯೊಂದು ಗ್ರಾಮಕ್ಕೆ ನೀಡಿರುವ ಅನುದಾನದ ಸಂಪೂರ್ಣ ದಾಖಲೆಗಳೊಂದಿಗೆ ಉತ್ತರಿಸಲು ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಚರ್ಚೆಯ ದಿನಾಂಕ, ಸಮಯ ಹಾಗೂ ಸ್ಥಳವನ್ನು ಶಾಸಕರೇ ನಿರ್ಧರಿಸಲಿ. ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ಚರ್ಚೆ ನಡೆಯಲಿ. ಚರ್ಚೆಯು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಸೀಮಿತವಾಗದೆ, ಕ್ಷೇತ್ರದ ಗ್ರಾಮಗಳ ಅಭಿವೃದ್ಧಿ, ರಸ್ತೆ ಸ್ಥಿತಿಗತಿ, ಅನುದಾನದ ಬಳಕೆ ಹಾಗೂ ಕಾಮಗಾರಿಗಳ ವಾಸ್ತವ ಪ್ರಗತಿಯ ಕುರಿತು ಕೇಂದ್ರೀಕೃತವಾಗಿರಲಿ ಎಂದು ಆದೇಶ್ ಶೆಟ್ಟಿ ಹೇಳಿದ್ದಾರೆ.

“ರೀಲ್ಸ್‌ಗಳಲ್ಲಿ ಅಭಿವೃದ್ಧಿಯ ಸಾಧನೆಗಳನ್ನು ಹೇಳಿಕೊಳ್ಳುವುದಕ್ಕಿಂತ, ಪ್ರತಿಯೊಂದು ಗ್ರಾಮದ ಅಭಿವೃದ್ಧಿಯ ಲೆಕ್ಕಪತ್ರಗಳೊಂದಿಗೆ ಸಾರ್ವಜನಿಕ ವೇದಿಕೆಗೆ ಬನ್ನಿ. ರೀಲ್ಸ್‌ಗಳಲ್ಲಿ ಅಲ್ಲ, ದಾಖಲೆಗಳೊಂದಿಗೆ ನೇರ ಚರ್ಚೆಗೆ ಬನ್ನಿ. ನನ್ನ ಬಹಿರಂಗ ಸವಾಲನ್ನು ಸ್ವೀಕರಿಸುತ್ತೀರಾ?” ಎಂದು ಆದೇಶ್ ಶೆಟ್ಟಿ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *