Breaking
17 Nov 2026, Tue

ಪ್ರತಿಭೆಗೆ ಅವಕಾಶ ಸಿಕ್ಕಾಗ ಮಾತ್ರ ಸಾಧನೆ ಬೆಳಗಲು ಸಾಧ್ಯ: ರುಕ್ಮಯ ಪೂಜಾರಿ

ಕಲ್ಲಡ್ಕ: ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದಕ್ಕೆ ಸೂಕ್ತ ಅವಕಾಶ ಸಿಕ್ಕಾಗ ಮಾತ್ರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ ಎಂದು ಮಾಜಿ ಶಾಸಕ ರುಕ್ಮಯ ಪೂಜಾರಿ ಹೇಳಿದರು.
ನ. 17ರಂದು ಕಲ್ಲಡ್ಕ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲ್ಲಡ್ಕ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿ 2026-27 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಪ್ರತಿಯೊಂದು ಮಗುವಿನಲ್ಲಿಯೂ ಒಂದಲ್ಲ ಒಂದು ಅದ್ಭುತ ಪ್ರತಿಭೆ ಅಡಗಿರುತ್ತದೆ. ಕೆಲವರ ಪ್ರತಿಭೆ ಮಾತಿನಲ್ಲಿ ಅರಳಿದರೆ, ಇನ್ನು ಕೆಲವರ ಪ್ರತಿಭೆ ಹಾಡು, ನೃತ್ಯ, ಚಿತ್ರಕಲೆ, ಅಭಿನಯ, ಕ್ರೀಡೆ ಹಾಗೂ ಬರವಣಿಗೆಯ ಮೂಲಕ ಅನಾವರಣಗೊಳ್ಳುತ್ತದೆ. ಮಕ್ಕಳ ಪ್ರತಿಭೆಯನ್ನು ಅಳೆಯಲು ಅಂಕಗಳೇ ಮಾನದಂಡವಲ್ಲ. ಪ್ರತಿಯೊಂದು ಮಗುವಿಗೂ ತನ್ನದೇ ಆದ ಸಾಮರ್ಥ್ಯ, ಕನಸು ಹಾಗೂ ಸಾಧನೆಯ ಹಾದಿಯಿದೆ. ಅಂತಹ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಮತ್ತು ಅವಕಾಶ ಕಲ್ಪಿಸಿಕೊಡುವುದು ಅಗತ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಮಧುಸೂದನ್ ಐತಲ್ ವಹಿಸಿದ್ದರು.
ಬಂಟ್ವಾಳ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಆಶಾ ನಾಯಕ್ ಮಾತನಾಡಿ, ಪ್ರತಿಭಾ ಸ್ಪರ್ಧೆ ಎಂಬುದು ಕೇವಲ ಗೆಲುವು-ಸೋಲಿನ ವೇದಿಕೆಯಲ್ಲ. ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸುವ, ಆತ್ಮವಿಶ್ವಾಸವನ್ನು ಬೆಳೆಸುವ ಹಾಗೂ ಅವರ ಕನಸುಗಳಿಗೆ ರೆಕ್ಕೆ ನೀಡುವ ಸುಂದರ ಅವಕಾಶವಾಗಿದೆ ಎಂದರು.


ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಪದ್ಮನಾಭ ರೈ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಐಡಾ ಸುರೇಶ್, ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಚಂದನ್ ಜೈನ್, ಸದಸ್ಯರಾದ ಸುರೇಶ್, ನವೀನ್, ಅಬ್ಬು ಬಕ್ಕರ್, ಅಮೀದ್ ಆಲಿ, ನಜೀರ್ ಮೊದಲಾದವರು ಉಪಸ್ಥಿತರಿದ್ದರು.
ಪದವೀಧರ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಸ್ವಾಗತಿಸಿದರು. ಕ್ಲಸ್ಟರ್ ಸಿ ಆರ್ ಪಿ ಜ್ಯೋತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವಂದಿಸಿದರು. ಶಿಕ್ಷಕರೊಬ್ಬರು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕರು ಸಹಕರಿಸಿದರು.

Leave a Reply

Your email address will not be published. Required fields are marked *