Breaking
17 Nov 2026, Tue

ಬೈಂದೂರು ಸೇವಾಧಾಮದಲ್ಲಿ ದೀಪಾವಳಿ ಸಂಭ್ರಮ: ದಿವ್ಯಾಂಗರೊಂದಿಗೆ ಬೆಳಕಿನ ಹಬ್ಬ ಆಚರಣೆ

ಬೈಂದೂರು: ಬೆಳಕಿನ ಹಬ್ಬ ದೀಪಾವಳಿಯನ್ನು ಬೈಂದೂರಿನ ಒತ್ತಡ ಗಾಯ ನಿರ್ವಹಣಾ ಹಾಗೂ ಪುನಶ್ಚೇತನ ಕೇಂದ್ರವಾದ ಸೇವಾಧಾಮದಲ್ಲಿ ದಿವ್ಯಾಂಗರು, ಫಲಾನುಭವಿಗಳು ಹಾಗೂ ಆರೈಕೆದಾರರೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಶಾಸಕ ಗುರುರಾಜ್ ಗಂಟಿಹೊಳೆ ಅವರ ಪರಿಕಲ್ಪನೆಯ ‘ಸಮೃದ್ಧ ಬೈಂದೂರು’ ಸಹಕಾರದೊಂದಿಗೆ ನ.13ರಂದು ಕಾರ್ಯಕ್ರಮ ನಡೆಯಿತು.

ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿಗಳು ದೈಹಿಕ ಸವಾಲುಗಳ ಜೊತೆಗೆ ಮಾನಸಿಕ ಒತ್ತಡ ಹಾಗೂ ಸಾಮಾಜಿಕ ಪ್ರತ್ಯೇಕತೆಯನ್ನು ಎದುರಿಸುವ ಸಾಧ್ಯತೆಗಳಿರುತ್ತವೆ. ಇಂತಹವರಿಗೆ ಸೂಕ್ತ ವೈದ್ಯಕೀಯ ಆರೈಕೆ, ಪುನರ್ವಸತಿ ಸೌಲಭ್ಯ ಹಾಗೂ ಮಾನಸಿಕ ಬೆಂಬಲ ಒದಗಿಸಿ, ಆತ್ಮವಿಶ್ವಾಸದಿಂದ ಜೀವನ ನಡೆಸಲು ನೆರವಾಗುವ ಕಾರ್ಯವನ್ನು ಸೇವಾಧಾಮ ನಿರಂತರವಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಹಬ್ಬದ ಸಂಭ್ರಮವನ್ನು ಸನಿವಾಸಿಗಳೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ., ಶಿರೂರಿನ ನಂಬಿಯಾರ್ ಕ್ಲಿನಿಕ್‌ನ ಡಾ. ನಂಬಿಯಾರ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲ್ ವಸ್ರೆ, ಸೇವಾಭಾರತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ತೆಂಕಿಲ್ಲಾಯ, ಮಂಜುಳಾ ವಿ. ಪ್ರಸಾದ್, ಸೀತಾರಾಮ ಶೆಟ್ಟಿ, ಜೇಸನ್ ಎಂ.ಡಿ. ಹಾಗೂ ಮಾಲಿನಿ ಉದ್ಘಾಟಿಸಿದರು.

ದೀಪಾವಳಿ ಆಚರಣೆಯ ಅಂಗವಾಗಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು, ಫಲಾನುಭವಿಗಳು, ಆರೈಕೆದಾರರು ಹಾಗೂ ಸಿಬ್ಬಂದಿಗೆ ವಿವಿಧ ಮನರಂಜನಾ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಹಾಡುಗಳ ಮೂಲಕ ಎಲ್ಲರನ್ನೂ ರಂಜಿಸಲಾಯಿತು. ಶುಭ ಘಳಿಗೆಯಲ್ಲಿ ಎಲ್ಲರೂ ಒಟ್ಟಾಗಿ ಹಣತೆ ಬೆಳಗಿಸಿ, ಪಟಾಕಿ ಸಿಡಿಸುವ ಮೂಲಕ ದೀಪಾವಳಿಯ ಸಂಭ್ರಮವನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ದಾನಿಗಳು, ಹಿತೈಷಿಗಳು, ಹೇನಬೇರು ಗ್ರಾಮಸ್ಥರು, ಸನಿವಾಸಿಗಳು, ಆರೈಕೆದಾರರು, ಸ್ವಯಂಸೇವಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *