ಉಪ್ಪಿನಂಗಡಿ: ಮೂರು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಶವ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಹಿರೇಬಂಡಾಡಿ ಗ್ರಾಮದ ಪೆರಾಬೆ ನಿವಾಸಿ, ಅತ್ತೂರಿನಲ್ಲಿ ಟೈರ್ ಪಂಕ್ಚರ್ ರಿಪೇರಿ ಅಂಗಡಿ ನಡೆಸುತ್ತಿದ್ದ ಮಾಧವ ಗೌಡ (44) ಮೃತರು.

ಅಕ್ಟೋಬರ್ 2ರಂದು ಮನೆಯಿಂದ ಅಂಗಡಿಗೆ ತೆರಳಿದ್ದ ಮಾಧವ ಗೌಡ ಬಳಿಕ ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಉಪ್ಪಿನಂಗಡಿಯ ಕುಮಾರಧಾರ ನದಿಯ ಹಳೆಯ ಸೇತುವೆ ಮೇಲೆ ಅವರ ಬೈಕ್ ಹಾಗೂ ಮೊಬೈಲ್ ಫೋನ್ ಪತ್ತೆಯಾಗಿತ್ತು. ಅವರು ನದಿಗೆ ಹಾರಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿತ್ತು.
ಅಕ್ಟೋಬರ್ 4ರಂದು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಡೈವರ್ಗಳು ಕುಮಾರಧಾರ–ನೇತ್ರಾವತಿ ನದಿಗಳ ಸಂಗಮ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಿದರೂ ಯಾವುದೇ ಸುಳಿವು ದೊರೆತಿರಲಿಲ್ಲ.

ಈ ನಡುವೆ ಅಕ್ಟೋಬರ್ 5ರಂದು 34ನೇ ನೆಕ್ಕಿಲಾಡಿ ಗ್ರಾಮದ ಬೊಲ್ಲಾರದಲ್ಲಿ ನದಿಯಲ್ಲಿ ಶವವೊಂದು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಶವವು ಮಾಧವ ಗೌಡ ಅವರದ್ದೇ ಎಂಬುದು ದೃಢಪಟ್ಟಿತು.
ಕುಟುಂಬಸ್ಥರ ಪ್ರಕಾರ, ಮಾಧವ ಗೌಡ ಅವರು ಹಲವು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ಮದ್ಯ ವ್ಯಸನಕ್ಕೂ ಒಳಗಾಗಿದ್ದರು. ಸುಮಾರು ನಾಲ್ಕು ತಿಂಗಳ ಹಿಂದೆ ಪುತ್ತೂರಿನ ಆಸ್ಪತ್ರೆಯಲ್ಲಿ ಮದ್ಯ ವ್ಯಸನಮುಕ್ತ ಚಿಕಿತ್ಸೆಯನ್ನೂ ಪಡೆದಿದ್ದರು. ಆದರೆ ನಾಪತ್ತೆಯಾಗುವ ಮೂರು ದಿನಗಳ ಮುನ್ನ ಮತ್ತೆ ಮದ್ಯಪಾನ ಆರಂಭಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಘಟನೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


