Breaking
26 Oct 2026, Mon

ಬಂಟ್ವಾಳ: ಆಟವಾಡುತ್ತಿದ್ದ ವೇಳೆ ಕುತ್ತಿಗೆಗೆ ಹಗ್ಗ ಸಿಲುಕಿ 9 ವರ್ಷದ ಬಾಲಕ ಸಾವು

ಬಂಟ್ವಾಳ: ಮನೆಯ ಹಾಲ್‌ನಲ್ಲಿ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಉಸಿರುಗಟ್ಟಿ 9 ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಮಾವಿನಕಟ್ಟೆ ಸಮೀಪದ ಕೇಂತಲೆ ಮನೆಯಲ್ಲಿ ಅ. 25ರಂದು ರಾತ್ರಿ ನಡೆದಿದೆ.

ಕೇಂತಲೆ ಮನೆ ನಿವಾಸಿ ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಮೃತಪಟ್ಟ ಬಾಲಕ.

ಅ. 25ರಂದು ರಾತ್ರಿ ಅಮೃತ್ ಮನೆಯ ಎದುರಿನ ಹಾಲ್‌ನಲ್ಲಿ ಒಬ್ಬನೇ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಕಿಟಕಿಗೆ ಮೊದಲೇ ಸಿಕ್ಕಿಸಲಾಗಿದ್ದ ಹಗ್ಗ ಆಕಸ್ಮಿಕವಾಗಿ ಬಾಲಕನ ಕುತ್ತಿಗೆಗೆ ಸಿಲುಕಿಕೊಂಡಿದೆ. ಪರಿಣಾಮ ಉಸಿರುಗಟ್ಟಿ ಬಾಲಕ ಹಗ್ಗದಲ್ಲಿ ಸಿಲುಕಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಬಾಲಕನ ಸಹೋದರಿ ಪ್ರಾರ್ಥನಾ, ಅಮೃತ್ ಮಾತನಾಡುತ್ತಿಲ್ಲ ಎಂದು ತಿಳಿಸಿ ಜೋರಾಗಿ ಕೂಗುತ್ತಾ ಸಮೀಪದ ಮನೆಯಲ್ಲಿದ್ದ ಚಿಕ್ಕಪ್ಪನ ಮನೆಗೆ ಓಡಿ ಹೋಗಿದ್ದಾಳೆ. ಬಳಿಕ ಕುಟುಂಬದವರು ಆನಂದ ಪೂಜಾರಿ ಅವರ ಮನೆಗೆ ತೆರಳಿ ನೋಡಿದಾಗ, ಅಮೃತ್‌ನ ತಾಯಿ ಗೀತಾ ಅವರು ಬಾಲಕನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅಳುತ್ತಿದ್ದರು ಎನ್ನಲಾಗಿದೆ.

ಕೂಡಲೇ ಬಾಲಕನಿಗೆ ಉಪಚರಿಸಲಾಯಿತಾದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಪರೀಕ್ಷಿಸಿ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಸಂಬಂಧ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 27/2026ರಂತೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *