Breaking
26 Oct 2026, Mon

ಕುಂದಾಪುರ: ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು; ಬಟ್ಟೆ ತೊಳೆಯಲು ತೆರಳಿದ್ದ ವೇಳೆ ಅವಘಡ

ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ ಬಾಲಕಿಯರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಭಾನುವಾರ ಸಂಜೆ ಹೊಸಾಡು ಗ್ರಾಮದ ಕೊಪ್ಪರಿಗೆ ಗುಡ್ಡೆಯಲ್ಲಿ ನಡೆದಿದೆ.

ಮೃತರನ್ನು ಮುಳ್ಳಿಕಟ್ಟೆಯಲ್ಲಿ ಜೋಪಡಿಯಲ್ಲಿ ವಾಸಿಸುತ್ತಿದ್ದ, ಮೂಲತಃ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಮುದ್ದಿನಕೊಪ್ಪದ ಚಂದ್ರು ಬಸವರಾಜ ವೇಷಗಾರ ಮತ್ತು ಮಂಜಕಾಳು ದಂಪತಿಯ ಪುತ್ರಿ ಸುನೀತಾ (13) ಹಾಗೂ ಅವರ ಚಿಕ್ಕಪ್ಪನ ಮಗ ದಿವಂಗತ ಮಂಜುನಾಥ ಮತ್ತು ಶಾರದಾ ದಂಪತಿಯ ಪುತ್ರಿ ವೈಶಾಲಿ (13) ಎಂದು ಗುರುತಿಸಲಾಗಿದೆ. ಇಬ್ಬರೂ ಹೊಸಾಡು ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಭಾನುವಾರ ಸಂಜೆ ಸುಮಾರು 4 ಗಂಟೆಗೆ ಗುಡಿಸಲಿನ ಐವರು ಮಕ್ಕಳು ಹೊಸಾಡು ಗ್ರಾಮದ ಕೊಪ್ಪರಿಗೆ ಗುಡ್ಡೆಯಲ್ಲಿರುವ ಕಡುಬಿನ ಕೆರೆಗೆ ಬಟ್ಟೆ ತೊಳೆಯಲು ತೆರಳಿದ್ದರು. ಈ ವೇಳೆ ಕೆರೆಯ ದಂಡೆಯಲ್ಲಿ ಬಟ್ಟೆ ತೊಳೆಯುತ್ತಿದ್ದ ಸುನೀತಾ ಮತ್ತು ವೈಶಾಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ಈಜಲು ಬಾರದೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿಯ ಈಜು ತಜ್ಞ ದಿನೇಶ್ ಖಾರ್ವಿ ನೇತೃತ್ವದ ತಂಡ, ಟೀಮ್ ಎಚ್‌ಐ ತುರ್ತು ಸ್ಪಂದನ ತಂಡ, ಕುಂದಾಪುರ ಅಗ್ನಿಶಾಮಕ ದಳ ಹಾಗೂ ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಕೆರೆಯಿಂದ ಮೇಲೆತ್ತಲು ನೆರವಾದರು.

ಬಳಿಕ ಗಂಗೊಳ್ಳಿಯ ಶ್ರೀ ವೀರೇಶ್ವರ ಸೇವಾ ಟ್ರಸ್ಟ್‌ನ ಆಂಬುಲೆನ್ಸ್ ಮೂಲಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಪವನ್ ನಾಯಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *