Breaking
23 Oct 2026, Fri

ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಸಿಲುಕಿದ ಗಾಳಿಪಟದ ದಾರ; ದಾರುಣ ಸಾವು

ಹುಬ್ಬಳ್ಳಿ: ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ 38 ವರ್ಷದ ಮಹಿಳೆ ಮೃತಪಟ್ಟಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಮೃತರನ್ನು ವಿದ್ಯಾ ಗೌಡರ್ ಎಂದು ಗುರುತಿಸಲಾಗಿದ್ದು, ಅವರು ಲ್ಯಾಬ್ ತಂತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಮನೆಯಿಂದ ಸ್ಕೂಟಿಯಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಶಿವಶಂಕರ ಕಾಲೋನಿ ಸಮೀಪ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.


ಪ್ರಯಾಣದ ವೇಳೆ ಏಕಾಏಕಿ ಗಾಳಿಪಟದ ಮಾಂಜಾ ದಾರ ವಿದ್ಯಾ ಅವರ ಕುತ್ತಿಗೆಗೆ ಸಿಲುಕಿದೆ ಎನ್ನಲಾಗಿದೆ. ಇದರಿಂದ ನಿಯಂತ್ರಣ ತಪ್ಪಿ ಸ್ಕೂಟಿಯಿಂದ ಕೆಳಗೆ ಬಿದ್ದ ಅವರಿಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರು ಗಾಳಿಪಟದ ದಾರಕ್ಕೆ ಬಲಿಯಾಗಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆಗೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *