Breaking
23 Oct 2026, Fri

ನೆಲ್ಯಾಡಿಯಲ್ಲಿ ನಿಂತಿದ್ದ ಟ್ಯಾಂಕರ್ ಗೆ ಕಾರು ಡಿಕ್ಕಿ: ಸಹಪ್ರಯಾಣಿಕ ಸಾವು, ಚಾಲಕನಿಗೆ ಗಾಯ

ನೆಲ್ಯಾಡಿ: ಕಡಬ ತಾಲೂಕಿನ ನೆಲ್ಯಾಡಿಯ ಐಟಿಐ ಕಾಲೇಜು ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸಹಪ್ರಯಾಣಿಕ ಮೃತಪಟ್ಟಿದ್ದು, ಕಾರು ಚಾಲಕ ಗಾಯಗೊಂಡ ಘಟನೆ ಅಕ್ಟೋಬರ್ 22ರ ತಡರಾತ್ರಿ ನಡೆದಿದೆ.


ಹಾಸನದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎ-22-ಎಂಎ-5270 ನೋಂದಣಿ ಸಂಖ್ಯೆಯ ಕಾರು, ನೆಲ್ಯಾಡಿ ಐಟಿಐ ಕಾಲೇಜಿನ ಮುಂಭಾಗ ಏಕಮುಖ ರಸ್ತೆಯ ಬದಿಯಲ್ಲಿ ನಿಂತಿದ್ದ ಟಿಎನ್-88-ಎ-9477 ನೋಂದಣಿ ಸಂಖ್ಯೆಯ ಟ್ಯಾಂಕರ್ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಮತ್ತು ಸಹಪ್ರಯಾಣಿಕ ಗಾಯಗೊಂಡಿದ್ದರು. ಸ್ಥಳಕ್ಕೆ ಧಾವಿಸಿದ ನೆಲ್ಯಾಡಿ ನಿವಾಸಿ ವಿ.ಜೆ. ಜೋಸೆಫ್ (55) ಅವರು ಸಾರ್ವಜನಿಕರ ನೆರವಿನೊಂದಿಗೆ ಗಾಯಾಳುಗಳನ್ನು ನೆಲ್ಯಾಡಿಯ ಆಸ್ಪತ್ರೆಗೆ ಕರೆದೊಯ್ದರು.


ಈ ವೇಳೆ ಸಹಪ್ರಯಾಣಿಕನನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಗಾಯಗೊಂಡ ಕಾರು ಚಾಲಕನನ್ನು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 138/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 281 ಮತ್ತು 106ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *