ಕಡಬ: ರಸ್ತೆಬದಿಯಲ್ಲಿ ನಿಂತಿದ್ದ 81 ವರ್ಷದ ವೃದ್ಧೆಯೊಬ್ಬರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟ ಘಟನೆ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲಾರ ಎಂಬಲ್ಲಿ ನಡೆದಿದೆ.

ಮೃತರನ್ನು ಕಡಬ ಗ್ರಾಮದ ಕಾಳಾರ ಪೆರ್ಲದಕೆರೆ ನಿವಾಸಿ ವಾರಿಜಾ (81) ಎಂದು ಗುರುತಿಸಲಾಗಿದೆ.

ಸೋಮವಾರ ಮಧ್ಯಾಹ್ನ ರಸ್ತೆ ದಾಟಲು ಕಾಯುತ್ತಿದ್ದ ವಾರಿಜಾ ರಸ್ತೆಬದಿಯಲ್ಲಿ ನಿಂತಿದ್ದ ವೇಳೆ ಕಡಬ ಕಡೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮೊದಲು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ ಅವರು ಮೃತಪಟ್ಟಿದ್ದಾರೆ.

ವಾರಿಜಾ ಅವರಿಗೆ ಪತಿ ಅಥವಾ ಮಕ್ಕಳಿರಲಿಲ್ಲ. ಅವರು ಪೆರ್ಲದಕೆರೆಯಲ್ಲಿರುವ ತಮ್ಮ ಅಕ್ಕನ ಮನೆಯ ಸಮೀಪ ವಾಸಿಸುತ್ತಿದ್ದು, ಸಹೋದರಿಯ ಪುತ್ರ ಧನಂಜಯ ಅವರು ಅವರನ್ನು ನೋಡಿಕೊಳ್ಳುತ್ತಿದ್ದರು.


