Breaking
20 Jun 2026, Sat

ಆಲಂಕಾರು: ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ

ಕಡಬ: ಪತ್ನಿಯನ್ನು ಕೊಂದು ಬಳಿಕ ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕಿತ ಘಟನೆ ಜೂ.20ರ ಶನಿವಾರ ಮಧ್ಯಾಹ್ನ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಆಲಂಕಾರು ಕಜೆಯಲ್ಲಿ ಬೆಳಕಿಗೆ ಬಂದಿದೆ.

ಮೃತರನ್ನು ಬಜಗೋಳಿಯ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತ ಎಂದು ಗುರುತಿಸಲಾಗಿದೆ. ದಂಪತಿ ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದು, ಬಳಿಕ ಸ್ಥಳಾಂತರಗೊಂಡಿದ್ದರು ಎನ್ನಲಾಗಿದೆ.

ಮಾಹಿತಿಯ ಪ್ರಕಾರ, ಸುಮಾರು ಒಂದು ತಿಂಗಳ ಹಿಂದೆ ಹೋಟೆಲ್ ಬಿಟ್ಟು ತೆರಳಿದ್ದ ದಂಪತಿ ಜೂನ್ 19ರ ಸಂಜೆ ಆಲಂಕಾರು ಕಜೆಯ ಬಾಡಿಗೆ ಮನೆಗೆ ಮತ್ತೆ ಬಂದಿದ್ದರು. ಜೂನ್ 20ರಂದು ಮನೆಯಲ್ಲಿ ಇಬ್ಬರೂ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯ ಒಳಗಿನಿಂದ ಚಿಲಕ ಹಾಕಲಾಗಿದ್ದುದರಿಂದ ಸ್ಥಳೀಯರಿಗೆ ಅನುಮಾನ ಮೂಡಿತ್ತು.

ಘಟನೆಯ ವೇಳೆ ಮನೆಯಲ್ಲಿದ್ದ ಎರಡು ವರ್ಷದ ಹೆಣ್ಣು ಮಗು ಅತ್ತು ಬಳಿಕ ನಿದ್ದೆಗೆ ಜಾರಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ತೀವ್ರ ದುಃಖ ಮೂಡಿಸಿದೆ. ಸ್ಥಳಕ್ಕೆ ಕಡಬ ಪೊಲೀಸ್ ಉಪನಿರೀಕ್ಷಕ ಜಂಬುರಾಜ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣದ ನಿಖರ ಕಾರಣ ಪೊಲೀಸ್ ತನಿಖೆಯ ಬಳಿಕವೇ ಸ್ಪಷ್ಟವಾಗಲಿದೆ.

Leave a Reply

Your email address will not be published. Required fields are marked *