ತೆಕ್ಕಟ್ಟೆ: ರಾಷ್ಟ್ರೀಯ ಹೆದ್ದಾರಿ 66ರ ಶ್ರೀ ಬ್ರಹ್ಮಸ್ಥಾನ ಸಮೀಪದಲ್ಲಿರುವ ‘ಗುರು ಬ್ರಹ್ಮ ಜನರಲ್ ಸ್ಟೋರ್’ ನಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಅಂಗಡಿ ಮಾಲೀಕ ಸಂತೋಷ್ ಅವರು ಎಂದಿನಂತೆ ವ್ಯಾಪಾರ ಮುಗಿಸಿ ಮನೆಗೆ ತೆರಳಿದ ಬಳಿಕ, ರಾತ್ರಿ ಸುಮಾರು 1.30ರ ವೇಳೆಗೆ ಅಂಗಡಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಇಡೀ ಅಂಗಡಿಗೆ ವ್ಯಾಪಿಸಿದೆ.

ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿಗಳು, ಫ್ರಿಡ್ಜ್ಗಳು, ಪೀಠೋಪಕರಣಗಳು ಸೇರಿದಂತೆ ಅಂಗಡಿಯಲ್ಲಿದ್ದ ಬಹುತೇಕ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ಪ್ರಾಥಮಿಕ ಮಾಹಿತಿಯಂತೆ, ಅಂಗಡಿಯಲ್ಲಿದ್ದ ಮೂರು ಫ್ರಿಡ್ಜ್ಗಳ ಪೈಕಿ ಒಂದರಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯಲ್ಲಿ ಸುಮಾರು 40 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿ ಹಾನಿಯಾಗಿರುವುದಾಗಿ ಅಂದಾಜಿಸಲಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.


