Breaking
19 Sep 2026, Sat

ಉದಯಗಿರಿ ಕುದ್ದುಪದವು ಸರ್ಕಾರಿ ಶಾಲೆಗೆ ರೋಟರಿ ಕ್ಲಬ್ ವಿಟ್ಲದಿಂದ ಪ್ರಿಂಟರ್ ಕೊಡುಗೆ: ಪದೋನ್ನತಿ ಹೊಂದಿದ ಮುಖ್ಯ ಶಿಕ್ಷಕಿ ರೇವತಿ ಬಿ. ಅವರಿಗೆ ಬೀಳ್ಕೊಡುಗೆ

ವಿಟ್ಲ: ಉದಯಗಿರಿ ಕುದ್ದುಪದವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ವಿಟ್ಲ ವತಿಯಿಂದ ಪ್ರಿಂಟರ್ ಕೊಡುಗೆಯಾಗಿ ನೀಡುವ ಹಾಗೂ ಪದೋನ್ನತಿ ಹೊಂದಿದ ಮುಖ್ಯ ಶಿಕ್ಷಕಿ ರೇವತಿ ಬಿ. ಅವರಿಗೆ ಬೀಳ್ಕೊಡುಗೆ ನೀಡುವ ಕಾರ್ಯಕ್ರಮ ನಡೆಯಿತು.


ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಜಲಜಾಕ್ಷಿ ಎಂ.ಇ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಟ್ಲ ರೋಟರಿ ಕ್ಲಬ್ ಅಧ್ಯಕ್ಷ ರೊ. ಕಾಪ್ಟನ್ ದಾಸಪ್ಪ ಪೂಜಾರಿ ಅವರು ಪ್ರಿಂಟರ್ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ರೋಟರಿ ಕ್ಲಬ್ನ ಈ ಕೊಡುಗೆಯು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಲಿ. ಶಿಕ್ಷಣ ಸಂಸ್ಥೆಗಳಿಗೆ ನೀಡುವ ಇಂತಹ ಸಹಕಾರಗಳು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.


ರೋಟರಿ ಸಂಸ್ಥೆಯ ಮೂಲಕ ಪ್ರಿಂಟರ್ ಕೊಡುಗೆ ನೀಡಿದ ರೊ. ದಿನೇಶ್ ಕುಮಾರ್ ಅವರು ಮಾತನಾಡಿ, ಸರ್ಕಾರಿ ಶಾಲೆಗಳು ಹೆಚ್ಚಿನ ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಹೊಂದುವ ಅಗತ್ಯತೆಯನ್ನು ವಿವರಿಸಿದರು. ರೊ. ನಾರಾಯಣ ಪೂಜಾರಿ ಅವರು ಶಾಲೆ ಮತ್ತು ಪೋಷಕರ ನಡುವಿನ ಉತ್ತಮ ಬಾಂಧವ್ಯ ಹಾಗೂ ಪರಸ್ಪರ ಸಹಭಾಗಿತ್ವದ ಮಹತ್ವದ ಕುರಿತು ಮಾತನಾಡಿದರು.


ಇದೇ ಸಂದರ್ಭದಲ್ಲಿ ಶಾಲೆಯಿಂದ ಹಿರಿಯ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿದ ರೇವತಿ ಬಿ. ಅವರನ್ನು ಶಾಲೆ ಹಾಗೂ ದಿವ್ಯಶಕ್ತಿ ಯುವಕ ಮಂಡಲದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಸನ್ಮಾನ ಸ್ವೀಕರಿಸಿದ ಮುಖ್ಯ ಶಿಕ್ಷಕಿ ರೇವತಿ ಬಿ. ಅವರು ತಮ್ಮ ಸೇವಾವಧಿಯಲ್ಲಿ ಕಾರ್ಯನಿರ್ವಹಿಸಿದ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಅಲ್ಲದೆ, ಶಾಲಾ ಶಿಕ್ಷಕಿಯರು ಹಾಗೂ ಅಡುಗೆ ಸಿಬ್ಬಂದಿಗೆ ಸಮವಸ್ತ್ರ ವಿತರಿಸಿ, ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಕಾರ್ಯಕ್ರಮದಲ್ಲಿ ರೊ. ವಸಂತ ಶೆಟ್ಟಿ, ಮಹಾಲಿಂಗ ಪಾಟಾಳಿ, ಗುರುವಪ್ಪ ನಾಯ್ಕ್, ಸತೀಶ್ ಪಾಟಾಳಿ, ಅಬ್ದುಲ್ ಕೆರೀಮ್, ಎಸ್ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಮುಖ್ಯ ಶಿಕ್ಷಕಿ ರೇವತಿ ಬಿ. ಸ್ವಾಗತಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ರೊ. ಕ್ಲಿಫರ್ಡ್ ವೇಗಸ್ ವಂದಿಸಿದರು. ಸುಜಾತಾ ಪಿ. ಹಾಗೂ ಯಶಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ಕೆ. ಹಾಗೂ ದೀಪಾ ನಾಯಕ್ ಸಹಕರಿಸಿದರು.

Leave a Reply

Your email address will not be published. Required fields are marked *