Breaking
19 Sep 2026, Sat

ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿಗೆ ಐತಿಹಾಸಿಕ ಅವಳಿ ಜಯ; ತಾಲೂಕು ಮಟ್ಟದ ಕಬಡ್ಡಿಯಲ್ಲಿ ಬಾಲಕ ಹಾಗೂ ಬಾಲಕಿಯರ ತಂಡಗಳು ಚಾಂಪಿಯನ್

ಮಂಗಳೂರು: ಕಾರ್ ಸ್ಟ್ರೀಟ್‌ನ ಬಿ.ಇ.ಎಂ. ಪದವಿ ಪೂರ್ವ ಕಾಲೇಜು ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ದಕ್ಷಿಣ ಕನ್ನಡ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಮಂಗಳೂರು ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿ–2026 ರಲ್ಲಿ ಮಂಗಳೂರಿನ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ಐತಿಹಾಸಿಕ ಸಾಧನೆ ಮಾಡಿದೆ.

ಪಂದ್ಯಾವಳಿಯ ಬಾಲಕರ ಹಾಗೂ ಬಾಲಕಿಯರ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಳ್ಳುವ ಮೂಲಕ ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜು ಅಪರೂಪದ ಅವಳಿ ಸಾಧನೆ ಮಾಡಿದೆ.

ಬಾಲಕಿಯರ ವಿಭಾಗದ ತೀವ್ರ ಪೈಪೋಟಿಯ ಫೈನಲ್ ಪಂದ್ಯದಲ್ಲಿ ಮಿಲಾಗ್ರಿಸ್ ತಂಡವು ಅತ್ಯುತ್ತಮ ರಕ್ಷಣಾತ್ಮಕ ಆಟ ಹಾಗೂ ಚುರುಕಿನ ರೈಡಿಂಗ್ ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸಿತು. ಬಾಲಕರ ವಿಭಾಗದಲ್ಲಿಯೂ ಸಂಘಟಿತ ಹಾಗೂ ಶಿಸ್ತಿನ ಆಟ ಪ್ರದರ್ಶಿಸಿದ ಮಿಲಾಗ್ರಿಸ್ ತಂಡವು ಎದುರಾಳಿಗಳನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.

ಈ ಅಮೋಘ ಸಾಧನೆಯೊಂದಿಗೆ ಬಾಲಕರ ಹಾಗೂ ಬಾಲಕಿಯರ ಎರಡೂ ತಂಡಗಳು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿವೆ. ಆಟಗಾರರ ಶಿಸ್ತು, ಕಠಿಣ ಪರಿಶ್ರಮ, ತಂಡಸ್ಫೂರ್ತಿ ಹಾಗೂ ತರಬೇತುದಾರರ ಸಮರ್ಪಿತ ಮಾರ್ಗದರ್ಶನ ಈ ಐತಿಹಾಸಿಕ ಅವಳಿ ಗೆಲುವಿಗೆ ಕಾರಣವಾಗಿದೆ.

ಈ ಸಾಧನೆಯ ಮೂಲಕ ವಿದ್ಯಾರ್ಥಿಗಳು ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿಗೆ ಅಪಾರ ಕೀರ್ತಿ ತಂದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮೆಲ್ವಿನ್ ವಾಸ್ ಸಂತಸ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ಸಂಚಾಲಕರಾದ ವಂ. ಫಾ. ಐವನ್ ಮೈಕೆಲ್ ರೊಡ್ರಿಗಸ್, ಪ್ರಾಂಶುಪಾಲರಾದ ಶ್ರೀ ಮೆಲ್ವಿನ್ ವಾಸ್, ತರಬೇತುದಾರರಾದ ಶ್ರೀ ಆಕಾಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ದಿವಾಕರ ಶೆಟ್ಟಿ, ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಕ್ರೀಡಾಭಿಮಾನಿಗಳು ವಿಜೇತ ಆಟಗಾರರನ್ನು ಅಭಿನಂದಿಸಿ, ಜಿಲ್ಲಾ ಮಟ್ಟದ ಪಂದ್ಯಾವಳಿಗೆ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *