ಮಂಗಳೂರು: ಭಾರತದ ಅಂತಾರಾಷ್ಟ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಬರೋಡಾ, 2025-26ನೇ ಸಾಲಿನ ಭಾರತ ಸರ್ಕಾರದ ‘ರಾಜಭಾಷಾ ಕೀರ್ತಿ ಪುರಸ್ಕಾರ’ ಯೋಜನೆಯಡಿ, 800ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ರಾಷ್ಟ್ರೀಕೃತ ಬ್ಯಾಂಕ್‌ಗಳು/ಹಣಕಾಸು ಸಂಸ್ಥೆಗಳ ಕೇಂದ್ರ ಕಚೇರಿ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.

ರಾಜಭಾಷೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಬ್ಯಾಂಕ್ ತೋರಿದ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಗುರುತಿಸಿ ಈ ಪುರಸ್ಕಾರವನ್ನು ನೀಡಲಾಗಿದೆ. ಇದರೊಂದಿಗೆ, ಪ್ರತಿಷ್ಠಿತ ರಾಜಭಾಷಾ ಕೀರ್ತಿ ಪುರಸ್ಕಾರವನ್ನು ಬ್ಯಾಂಕ್ ಸತತ ಐದನೇ ವರ್ಷ ಪಡೆದುಕೊಂಡಂತಾಗಿದೆ.

ಈ ಪ್ರಶಸ್ತಿಯನ್ನು ಹಿಂದಿ ದಿವಸ್ 2026 ಮತ್ತು ಆರನೇ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನದಂದು ಸೆಪ್ಟೆಂಬರ್ 14, 2026 ರಂದು ನವಿ ಮುಂಬೈನ ಸಿಡ್ಕೊ ಪ್ರದರ್ಶನ ಕೇಂದ್ರದಲ್ಲಿ ಗೌರವಾನ್ವಿತ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಪ್ರದಾನ ಮಾಡಲಾಯಿತು.

ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಡಾ. ದೇಬದತ್ತ ಚಂದ್ ಅವರು ಭಾರತ ಸರ್ಕಾರದ ಕಾರ್ಯದರ್ಶಿ (ಒಎಲ್) ಶ್ರೀಮತಿ ಅನ್ಶುಲಿ ಆರ್ಯ ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ನಿತ್ಯಾನಂದ ರೈ ಮತ್ತು ಶ್ರೀ ಬಂಡಿ ಸಂಜಯ್ ಕುಮಾರ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ಆಫ್ ಬರೋಡಾದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ದೇವದತ್ತ ಚಾಂದ್ ಅವರು, “ಗ್ರಾಹಕರು ಅತ್ಯಂತ ಆರಾಮದಾಯಕವಾಗಿ ಬಳಸುವ ಭಾಷೆಯಲ್ಲಿ ಅವರಿಗೆ ಸೇವೆ ಸಲ್ಲಿಸುವ ಬ್ಯಾಂಕ್ ಆಫ್ ಬರೋಡಾದ ಬದ್ಧತೆಯನ್ನು ಈ ಪುರಸ್ಕಾರ ಪ್ರತಿಬಿಂಬಿಸುತ್ತದೆ. ನಮ್ಮ ಡಿಜಿಟಲ್ ಮತ್ತು ಭೌತಿಕ ಸೇವಾ ಮಾರ್ಗಗಳಾದ bob World, WhatsApp Banking, Chatbots ಮತ್ತು Call Centres ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಬಹುಭಾಷಾ ಬ್ಯಾಂಕಿಂಗ್ ಸೇವೆಗಳನ್ನು ನಾವು ಮತ್ತಷ್ಟು ಬಲಪಡಿಸುತ್ತಿದ್ದೇವೆ.

ಇತ್ತೀಚೆಗೆ ಪರಿಚಯಿಸಲಾದ ನಮ್ಮ ಕೃತಕ ಬುದ್ಧಿಮತ್ತೆ (AI) ಆಧಾರಿತ ‘bob-SAMVAD’ ಸಾಧನವು ಭಾರತೀಯ ಭಾಷೆಗಳಾದ್ಯಂತ ಗ್ರಾಹಕರೊಂದಿಗೆ ಇನ್ನಷ್ಟು ಸುಗಮವಾಗಿ ಸಂವಹನ ನಡೆಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿದೆ. ಇದರಿಂದ ಗ್ರಾಹಕರ ಅಗತ್ಯಗಳನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಹಾಗೂ ಶಾಖಾ ಮಟ್ಟದಲ್ಲಿ ಅವರಿಗೆ ಇನ್ನಷ್ಟು ಉತ್ತಮ ಬ್ಯಾಂಕಿಂಗ್ ಅನುಭವವನ್ನು ಒದಗಿಸಲು ಸಾಧ್ಯವಾಗಲಿದೆ,” ಎಂದು ಹೇಳಿದರು.

ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಭಾಗದಲ್ಲಿ ಬ್ಯಾಂಕ್ ಆಫ್ ಬರೋಡಾ ಸತತ ಐದು ವರ್ಷಗಳಿಂದ ರಾಜಭಾಷಾ ಕೀರ್ತಿ ಪುರಸ್ಕಾರವನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಮೂರು ಪ್ರಥಮ ಬಹುಮಾನಗಳು ಮತ್ತು ಎರಡು ದ್ವಿತೀಯ ಬಹುಮಾನಗಳು ಬ್ಯಾಂಕ್‌ಗೆ ಲಭಿಸಿವೆ. ಇದರ ಜೊತೆಗೆ, ಬ್ಯಾಂಕ್‌ನ ಸಂಚಾಲಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರ ರಾಜಭಾಷಾ ಅನುಷ್ಠಾನ ಸಮಿತಿ (ಕಚೇರಿ), ಅಯೋಧ್ಯೆ, ‘A’ ಭಾಷಾ ಪ್ರದೇಶದ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.

ಅಲ್ಲದೆ, ಬ್ಯಾಂಕ್‌ನ ಸಂಚಾಲಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ 18 ನಗರ ರಾಜಭಾಷಾ ಅನುಷ್ಠಾನ ಸಮಿತಿಗಳಿಗೆ ಸೆಪ್ಟೆಂಬರ್ 15, 2026ರಂದು ‘ನರಾಕಾಸ್ ಪ್ರೋತ್ಸಾಹ ಸಮ್ಮಾನ್’ ನೀಡಿ ಗೌರವಿಸಲಾಯಿತು. ಈ ಎಲ್ಲಾ ಸಾಧನೆಗಳೊಂದಿಗೆ ಬ್ಯಾಂಕ್ ಆಫ್ ಬರೋಡಾ ವಿವಿಧ ವಿಭಾಗಗಳಲ್ಲಿ ಒಟ್ಟು 20 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

ಸಮಾರಂಭದಲ್ಲಿ ಬ್ಯಾಂಕ್ ಆಫ್ ಬರೋಡಾವನ್ನು ಪ್ರತಿನಿಧಿಸಿದ ಹಿರಿಯ ಅಧಿಕಾರಿಗಳಲ್ಲಿ ಶ್ರೀ ಮಧುರ ಕುಮಾರ್, ಮುಖ್ಯ ಪ್ರಧಾನ ವ್ಯವಸ್ಥಾಪಕರು ಮತ್ತು ವಲಯ ಮುಖ್ಯಸ್ಥರು, ಮುಂಬೈ ವಲಯ; ಡಾ. ಪುನೀತ್ ಕುಮಾರ್ ಮಿಶ್ರಾ, ಮುಖ್ಯಸ್ಥರು – ರಾಜಭಾಷೆ ಮತ್ತು ಸಂಸದೀಯ ಸಮಿತಿಗಳು; ಹಾಗೂ ಶ್ರೀ ಮನೀಶ್ ಕುಮಾರ್ ಸಿನ್ಹಾ, ಪ್ರಾದೇಶಿಕ ಮುಖ್ಯಸ್ಥರು, ನವಿ ಮುಂಬೈ ಪ್ರಾದೇಶಿಕ ಕಚೇರಿ ಸೇರಿದಂತೆ ಬ್ಯಾಂಕ್‌ನ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.






