ಸಿದ್ದಕಟ್ಟೆ: ಸಹಕಾರ ಸಂಘಗಳು ಕೇವಲ ಆರ್ಥಿಕ ವ್ಯವಹಾರಗಳಿಗೆ ಸೀಮಿತವಾಗದೆ ಸಮಾಜದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಿದಾಗ ಸಮಾಜದ ಪ್ರಗತಿ ಸಾಧ್ಯ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಹೇಳಿದರು.

ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ವತಿಯಿಂದ ಈ ವರ್ಷ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು, ಸದಸ್ಯರಿಗೆ ತಲಾ ಒಂದೊಂದು ಹಲಸಿನ ಗಿಡವನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ಒಟ್ಟು ಸುಮಾರು 3,000 ಗಿಡಗಳನ್ನು ವಿತರಿಸಲಾಗಿದೆ. ಪ್ರತಿಯೊಬ್ಬರೂ ತಮ್ಮ ಹಿರಿಯರ ಹೆಸರಿನಲ್ಲಿ ಗಿಡ ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಪ್ರಧಾನಮಂತ್ರಿ ಭಾರತೀಯ ಜನೌಷಧಿ ಸಿದ್ದಕಟ್ಟೆ ಘಟಕದ ವತಿಯಿಂದ ಸಂಘದ ವಠಾರದಲ್ಲಿ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಯಿತು. ರಕ್ತದಲ್ಲಿನ ಸಕ್ಕರೆ ಹಾಗೂ ರಕ್ತದೊತ್ತಡ ಪರೀಕ್ಷೆ ಸೇರಿದಂತೆ ಆರೋಗ್ಯ ತಪಾಸಣೆ ಮಾಡಲಾಯಿತು.

ವರದಿ ಸಾಲಿನಲ್ಲಿ ಸಂಘವು ₹133.63 ಕೋಟಿ ಸಾಲ ವಿತರಿಸಿದ್ದು, ಒಟ್ಟು ₹720.47 ಕೋಟಿ ವ್ಯವಹಾರ ನಡೆಸಿ ₹2.19 ಕೋಟಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ.12ರಷ್ಟು ಲಾಭಾಂಶ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸಂಘದಲ್ಲಿ 3,904 ‘ಎ’ ತರಗತಿ ಹಾಗೂ 1,981 ‘ಡಿ’ ತರಗತಿ ಸೇರಿದಂತೆ ಒಟ್ಟು 5,885 ಸದಸ್ಯರಿದ್ದಾರೆ. 2,299 ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಮಂಗಳಾ ಕಿಸಾನ್ ಕಾರ್ಡ್ ಮೂಲಕ ₹49.82 ಕೋಟಿ ಸಾಲ, 391 ರೈತರಿಗೆ ಕೃಷಿ ಅಭಿವೃದ್ಧಿಗಾಗಿ ಶೇ.3ರ ಬಡ್ಡಿದರದಲ್ಲಿ ₹12.77 ಕೋಟಿ ಸಾಲ ಹಾಗೂ ಹೈನುಗಾರಿಕೆ ಪ್ರೋತ್ಸಾಹಕ್ಕಾಗಿ ಶೂನ್ಯ ಬಡ್ಡಿದರದಲ್ಲಿ ₹3.60 ಕೋಟಿ ಸಾಲ ನೀಡಲಾಗಿದೆ.

ಜಮೀನು ಅಡಮಾನ ಸಾಲ, ವೈಯಕ್ತಿಕ ಸಾಲ ಸೇರಿದಂತೆ ಒಟ್ಟು 2,788 ಸದಸ್ಯರಿಗೆ ₹152.24 ಕೋಟಿ ಸಾಲ ವಿತರಿಸಲಾಗಿದೆ. ಸಂಘವು ಶೇ.98ರಷ್ಟು ಸಾಲ ವಸೂಲಾತಿ ಸಾಧಿಸಿದ್ದು, ಪ್ರಸಕ್ತ ಸಾಲಿನಲ್ಲಿ ಶೇ.100ರಷ್ಟು ಸಾಲ ವಸೂಲಾತಿ ಸಾಧಿಸಲು ಸದಸ್ಯರು ಸಹಕಾರ ನೀಡುವಂತೆ ಪ್ರಭಾಕರ ಪ್ರಭು ಮನವಿ ಮಾಡಿದರು.

ಯಶಸ್ವಿನಿ ಆರೋಗ್ಯ ರಕ್ಷಣೆ ಯೋಜನೆಯಡಿ 612 ಕುಟುಂಬಗಳ 2,307 ಸದಸ್ಯರನ್ನು ನೋಂದಾಯಿಸಲಾಗಿದ್ದು, ₹4.23 ಲಕ್ಷ ಪ್ರೀಮಿಯಂ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಲಾಗಿದೆ. ಲೆಕ್ಕ ಪರಿಶೋಧನೆಯಲ್ಲಿ ಸಂಘ ಸತತವಾಗಿ ‘ಎ’ ಗ್ರೇಡ್ ಪಡೆಯುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನಿಂದ ಮೆಚ್ಚುಗೆ ಹಾಗೂ ಪ್ರಶಸ್ತಿಗಳಿಗೆ ಪಾತ್ರವಾಗಿದೆ ಎಂದು ತಿಳಿಸಿದರು.

ಆತ್ಮನಿರ್ಭರ ಭಾರತ ಸಂಕಲ್ಪ ಅಭಿಯಾನದಡಿ ಸಂಘದ ವ್ಯಾಪ್ತಿಯ ಸಹಕಾರಿಗಳು ಹಾಗೂ ಗ್ರಾಹಕರಿಗೆ ದೇಶೀಯ ಉತ್ಪನ್ನಗಳ ಉತ್ಪಾದನೆ ಮತ್ತು ಬಳಕೆಗೆ ಉತ್ತೇಜನ ನೀಡಲಾಗುವುದು. ಮುಂದಿನ ದಿನಗಳಲ್ಲಿ ಸಂಘದ ಕೇಂದ್ರ ಕಚೇರಿ ಆವರಣದಲ್ಲಿ ಸಾಮಾನ್ಯ ಸೇವಾ ಕೇಂದ್ರ ಆರಂಭಿಸಿ ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಒದಗಿಸಲಾಗುವುದು ಎಂದು ಪ್ರಭಾಕರ ಪ್ರಭು ತಿಳಿಸಿದರು.

ಮಹಾಸಭೆಯಲ್ಲಿ ನಿಧನರಾದ ಸಂಘದ 38 ಸದಸ್ಯರಿಗೆ ಮೌನ ಪ್ರಾರ್ಥನೆ ಸಲ್ಲಿಸಿ ನುಡಿನಮನ ಸಲ್ಲಿಸಲಾಯಿತು. ಪ್ರಧಾನ ಕಚೇರಿ ಸೇರಿದಂತೆ ರಾಯಿ, ಆರಂಬೋಡಿ, ಮಾವಿನಕಟ್ಟೆ ಹಾಗೂ ಅರಳ ಶಾಖೆಗಳು ಉತ್ತಮ ಸೇವೆ ಸಲ್ಲಿಸುತ್ತಿವೆ ಎಂದು ತಿಳಿಸಲಾಯಿತು.

ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಸತೀಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ವೀರಪ್ಪ ಪರವ, ಜಾರಪ್ಪ ನಾಯ್ಕ, ಮಂದರಾತಿ ಎಸ್. ಶೆಟ್ಟಿ, ಪುಷ್ಪಲತಾ ಎಸ್.ಆರ್., ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ನವೀನ್ ಹೆಗ್ಡೆ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ ಸ್ವಾಗತಿಸಿದರು. ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ದಿನೇಶ್ ಪೂಜಾರಿ ವಂದಿಸಿದರು.



