Breaking
19 Sep 2026, Sat

ಕಸ್ತೂರಿರಂಗನ್ ವರದಿ ಕರಡು ಕುರಿತು ವಿಶೇಷ ಗ್ರಾಮಸಭೆ

ಬೆಳ್ತಂಗಡಿ: ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ (ESA)ಕ್ಕೆ ಸಂಬಂಧಿಸಿದ ಕಸ್ತೂರಿರಂಗನ್ ವರದಿಯ ಕರಡು ಪ್ರತಿಯ ಕುರಿತು ಗ್ರಾಮ ಮಟ್ಟದಲ್ಲಿಯೇ ಸಾರ್ವಜನಿಕರ ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ದಾಖಲಿಸುವಂತೆ ಶಾಸಕ ಹರೀಶ್ ಪೂಂಜ ಅವರು ಸೆ.15ರಂದು ನಡೆದ ಜಿಲ್ಲಾ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಲಹೆ ನೀಡಿದ್ದರು.

ಶಾಸಕರ ಸಲಹೆಯಂತೆ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ಆದೇಶದ ಮೇರೆಗೆ ತಾಲೂಕು ಪಂಚಾಯತ್ ಮೂಲಕ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಗೆ ನಿರ್ದೇಶನ ನೀಡಲಾಗಿದೆ.

ವಿಶೇಷ ಗ್ರಾಮಸಭೆ ನಡೆಸಿ, ಕಸ್ತೂರಿರಂಗನ್ ವರದಿ ಕರಡು ಕುರಿತು ಸಾರ್ವಜನಿಕರಿಂದ ವ್ಯಕ್ತವಾಗುವ ಅಭಿಪ್ರಾಯ, ಆಕ್ಷೇಪಣೆ ಹಾಗೂ ಸಲಹೆಗಳನ್ನು ಗ್ರಾಮಸಭೆಯ ನಡಾವಳಿಯಲ್ಲಿ ದಾಖಲಿಸುವಂತೆ ತಿಳಿಸಲಾಗಿದೆ. ಈ ಮಾಹಿತಿಯನ್ನು ಪಂಚತಂತ್ರ 2.0ರಲ್ಲಿಯೂ ದಾಖಲಿಸಲು ಸೂಚಿಸಲಾಗಿದೆ.

ಇದರಿಂದ ಪಶ್ಚಿಮ ಘಟ್ಟ ಪ್ರದೇಶದ ರೈತರು, ಸ್ಥಳೀಯ ನಿವಾಸಿಗಳು ಹಾಗೂ ಗ್ರಾಮಸ್ಥರು ತಮ್ಮ ಪ್ರದೇಶದ ವಾಸ್ತವಾಂಶಗಳು, ಸಮಸ್ಯೆಗಳು ಮತ್ತು ಅಭಿಪ್ರಾಯಗಳನ್ನು ಅಧಿಕೃತವಾಗಿ ದಾಖಲಿಸಿ ಸರ್ಕಾರದ ಗಮನಕ್ಕೆ ತರುವ ಅವಕಾಶ ದೊರೆತಿದೆ.

ಗ್ರಾಮಸ್ಥರು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುವ ವಿಶೇಷ ಗ್ರಾಮಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಸ್ತೂರಿರಂಗನ್ ವರದಿ ಕರಡು ಹಾಗೂ ESAಗೆ ಸಂಬಂಧಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ನಡಾವಳಿಯಲ್ಲಿ ದಾಖಲಿಸುವಂತೆ ಶಾಸಕ ಹರೀಶ್ ಪೂಂಜ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *