Breaking
17 Sep 2026, Thu

ಕುತ್ತಾರು: 21ರ ಹರೆಯದ ಯುವಕನ ಮೆದುಳು ನಿಷ್ಕ್ರಿಯ: ಮಗನ ಅಂಗಾಂಗ ದಾನಕ್ಕೆ ಮುಂದಾದ ಕುಟುಂಬ

ಉಳ್ಳಾಲ: ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಕಟ್ಟೆಯ ಬಳಿ ಸೋಮವಾರ ರಾತ್ರಿ ನಡೆದ ಬೈಕ್–ಸ್ಕೂಟರ್ ಮುಖಾಮುಖಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 21ರ ಹರೆಯದ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು, ವೈದ್ಯರ ಸಲಹೆಯಂತೆ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಕುತ್ತಾರುವಿನ ಆಯೆರೆ ಬೆಟ್ಟು ನಿವಾಸಿಗಳಾದ ಗೋಪಾಲ ಮತ್ತು ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21) ಮೆದುಳು ನಿಷ್ಕ್ರಿಯಗೊಂಡ ಯುವಕ.


ಸೋಮವಾರ ರಾತ್ರಿ ಸುಮಾರು 7.30ರ ವೇಳೆಗೆ ವರ್ಷಿತ್ ಅವರು ಕುತ್ತಾರುವಿನಿಂದ ಮನೆ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಕೊರಗಜ್ಜನ ಆದಿಕ್ಷೇತ್ರದ ಬಳಿಯ ದುರ್ಗಾ ಆಟೋ ವರ್ಕ್ಸ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಬರುತ್ತಿದ್ದ ಸ್ಕೂಟರ್ಗೆ ಅವರ ಬೈಕ್ ಮುಖಾಮುಖಿ ಡಿಕ್ಕಿಯಾಗಿದೆ.


ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ವರ್ಷಿತ್ ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೈದ್ಯರು ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದ್ದಾರೆ.
ಮಗನ ಅಂಗಾಂಗ ದಾನಕ್ಕೆ ಕುಟುಂಬದ ಸಮ್ಮತಿ:


ವೈದ್ಯರ ಸಲಹೆಯಂತೆ ಪೋಷಕರು ಮಗನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೇ ವಿವಿಧ ಆಸ್ಪತ್ರೆಗಳಿಂದ ಮೂತ್ರಪಿಂಡ, ಯಕೃತ್ತು, ಹೃದಯ ಹಾಗೂ ಶ್ವಾಸಕೋಶಗಳಿಗೆ ಬೇಡಿಕೆ ಬಂದಿದ್ದು, ‘ಝೀರೋ ಟ್ರಾಫಿಕ್’ ವ್ಯವಸ್ಥೆಯ ಮೂಲಕ ಅಂಗಾಂಗಗಳನ್ನು ಸಂಬಂಧಪಟ್ಟ ಆಸ್ಪತ್ರೆಗಳಿಗೆ ರವಾನಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


ಅಪಘಾತದಲ್ಲಿ ಸ್ಕೂಟರ್ ಸವಾರ ಧೀರಜ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರ್ಷಿತ್ ಅವಿವಾಹಿತರಾಗಿದ್ದು, ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ತಂದೆ, ತಾಯಿ ಹಾಗೂ ಏಕೈಕ ಸಹೋದರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *