ಹಿರ್ಣಿ–ಅರಳ: ಗಣೇಶ ಚೌತಿಯ ಪವಿತ್ರ ದಿನದಂದು ಅಶೋಕ್ ನಾಯ್ಕ್ ಕಳಸಬೈಲು ಅವರ ಮಾರ್ಗದರ್ಶನದಲ್ಲಿ 58ನೇ ಭಜನಾ ತಂಡವಾಗಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಹಿರ್ಣಿ–ಅರಳ ಉದ್ಘಾಟನೆಗೊಂಡಿತು.

ಹಿರಿಯ ಕೃಷಿಕ ನಾರಾಯಣ ನಾಯ್ಕ್ ದೀಪ ಬೆಳಗಿಸುವ ಮೂಲಕ ಭಜನಾ ತಂಡಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಯಕ್ಷಗಾನದ ಗೆಜ್ಜೆ ಹಾಗೂ ಭಜನೆಯ ತಾಳದ ಮಹತ್ವವನ್ನು ತಮ್ಮ ಅನುಭವದ ಮೂಲಕ ವಿವರಿಸಿದರು.

“ಭಜನೆ ನಮ್ಮ ಮನೆಗಳಿಂದಲೇ ಆರಂಭವಾಗಬೇಕು. ಮಕ್ಕಳಿಗೆ ಭಜನೆಯ ಮೂಲಕ ಸಂಸ್ಕೃತಿ, ಸಂಪ್ರದಾಯ ಹಾಗೂ ಭಕ್ತಿಯ ಅರಿವು ಮೂಡಬೇಕು” ಎಂದು ಅವರು ಹೇಳಿದರು.

ಅಶೋಕ್ ನಾಯ್ಕ್ ಕಳಸಬೈಲು ಅವರ ಭಜನಾ ಕ್ಷೇತ್ರದ ಸೇವೆಯನ್ನು ಶ್ಲಾಘಿಸಿದ ನಾರಾಯಣ ನಾಯ್ಕ್, “ಅಶೋಕ್ ನಾಯ್ಕ್ ಅವರ ಸಾಧನೆ ಅದ್ಭುತ. ಇಷ್ಟೊಂದು ಭಜನಾ ತಂಡಗಳನ್ನು ರೂಪಿಸಿ ಬೆಳೆಸುವುದು ಸುಲಭದ ಕೆಲಸವಲ್ಲ. ಮಕ್ಕಳನ್ನು ಒಗ್ಗೂಡಿಸಿ ಭಜನೆ ಹಾಗೂ ಸಂಸ್ಕಾರದ ತರಬೇತಿ ನೀಡುತ್ತಿರುವುದು ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಸ್ವಾಗತವನ್ನು ಅಂಗನವಾಡಿ ಶಿಕ್ಷಕಿ ಪ್ರೇಮ ನಾಯ್ಕ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ 25 ವರ್ಷಗಳ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಲಾವಣ್ಯ ರಾಯಿ, ಯಕ್ಷಗಾನ ಕಲಾಭಿಮಾನಿ ಅಶ್ವಿನಿ, ಭರತನಾಟ್ಯ ಕಲಾವಿದೆ ಚೇತನ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತೆ ದಿವ್ಯ ನಾಯ್ಕ್, ಶ್ರೀಧರ್ ನಾಯ್ಕ್, ಪ್ರಸಾದ್ ಪೂಜಾರಿ, ತಿಮ್ಮಯ್ಯ ಕರ್ಪೆ, ನಿರಂಜನ್ ನಾಯ್ಕ್ ಸೇರಿದಂತೆ ಹಿರಿಯರು, ಪೋಷಕರು ಹಾಗೂ ಭಜನಾ ಅಭಿಮಾನಿಗಳು ಉಪಸ್ಥಿತರಿದ್ದರು.

ಗಣೇಶ ಚೌತಿಯ ಪವಿತ್ರ ದಿನದಂದು ಆರಂಭಗೊಂಡ 58ನೇ ಭಜನಾ ತಂಡವು ಭಜನಾ ಪರಂಪರೆ, ಸಂಸ್ಕಾರ ಹಾಗೂ ಸಾಂಪ್ರದಾಯಿಕ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಂತಾಗಲಿ ಎಂದು ಗಣ್ಯರು ಶುಭ ಹಾರೈಸಿದರು.



