ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಬಳಸಿಕೊಂಡು ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.

ಸಜೀಪಮುನ್ನೂರು ಗ್ರಾಮದ ಪ್ರಪುಲ್ಲಾ ಜಾನೆಟ್ ಡಿ’ಕ್ರೂಸ್ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 40 ಸಾವಿರ ರೂ. ಮೌಲ್ಯದ ಚಿನ್ನಾಭರಣ ಹಾಗೂ 5 ಸಾವಿರ ರೂ. ನಗದು ಕಳವಾಗಿದೆ.

ಸೆ.14ರಂದು ಸಂಜೆ ಪ್ರಪುಲ್ಲಾ ಜಾನೆಟ್ ಡಿ’ಕ್ರೂಸ್ ಅವರು ಮಕ್ಕಳೊಂದಿಗೆ ಬೆಳ್ಳಾರೆಗೆ ತೆರಳಿದ್ದರು. ಸೆ.15ರಂದು ಬೆಳಗ್ಗೆ ಮನೆಗೆ ವಾಪಸ್ ಬಂದು ನೋಡಿದಾಗ ಬೆಡ್ರೂಮ್ನಲ್ಲಿದ್ದ ಬೆಡ್ ಸರಿದಿರುವುದು ಕಂಡುಬಂದಿದೆ. ವಾರ್ಡ್ರೋಬ್ನ ಬಾಗಿಲು ತೆರೆದಿದ್ದು, ಒಳಗಿದ್ದ ಬಟ್ಟೆಗಳನ್ನು ಕಳ್ಳರು ಚೆಲ್ಲಾಪಿಲ್ಲಿ ಮಾಡಿದ್ದರು.

ವಾರ್ಡ್ರೋಬ್ನಲ್ಲಿ ಇಟ್ಟಿದ್ದ ಸುಮಾರು 4 ಗ್ರಾಂ ತೂಕದ ಎರಡು ಜತೆ ಚಿನ್ನದ ಕಿವಿಯೋಲೆಗಳು ಕಳವಾಗಿದ್ದು, ಅವುಗಳ ಮೌಲ್ಯ ಸುಮಾರು 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಅಲ್ಲದೆ ಮನೆಯ ಸೋಫಾದಲ್ಲಿದ್ದ ಡಬ್ಬದಲ್ಲಿ ಇರಿಸಿದ್ದ 5 ಸಾವಿರ ರೂ. ನಗದನ್ನೂ ಕಳ್ಳರು ಕಳವು ಮಾಡಿದ್ದಾರೆ.

ಮನೆಯ ಮತ್ತೊಂದು ವಾರ್ಡ್ರೋಬ್ನ ಬಾಗಿಲನ್ನೂ ತೆರೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಹುಡುಕಾಟ ನಡೆಸಿರುವುದು ಕಂಡುಬಂದಿದೆ.

ಮನೆಯ ಹಿಂಬದಿಯ ವರ್ಕ್ ಏರಿಯಾದಲ್ಲಿದ್ದ ಕಬ್ಬಿಣದ ಬಾಗಿಲಿಗೆ ಹಾಕಿದ್ದ ಬೀಗವನ್ನು ಮುರಿದು, ಬಳಿಕ ಮನೆಯ ಹಿಂಬದಿಗೆ ಅಳವಡಿಸಿದ್ದ ಮರದ ಬಾಗಿಲನ್ನೂ ಮುರಿದು ಕಳ್ಳರು ಒಳನುಗ್ಗಿರುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.



