Breaking
16 Sep 2026, Wed

ಬೆಳ್ತಂಗಡಿ: ಮನೆಗೆ ನುಗ್ಗಿ 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವು

ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಆಲಂದಿಲದಲ್ಲಿ ಮನೆಯವರು ಸಂಬಂಧಿಕರ ಗೃಹಪ್ರವೇಶಕ್ಕೆ ತೆರಳಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳರು 15.82 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವು ಮಾಡಿರುವ ಘಟನೆ ನಡೆದಿದೆ.

ಆಲಂದಿಲ ನಿವಾಸಿ ನೌಫಾಲ್ ಬಿ.ಎಂ. (34) ಅವರು ನೀಡಿದ ದೂರಿನಂತೆ, ಸೆ.13ರಂದು ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಸಂಬಂಧಿಕರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಕಳುಹಿಸಿದ ಬಳಿಕ ನೌಫಾಲ್ ಕೂಡ ಮನೆಗೆ ಬೀಗ ಹಾಕಿ ತರಕಾರಿ ವ್ಯಾಪಾರದ ಕೆಲಸಕ್ಕಾಗಿ ಬೆಳ್ತಂಗಡಿಗೆ ತೆರಳಿದ್ದರು.

ಸೆ.14ರಂದು ಮನೆಯಲ್ಲಿ ವಯರಿಂಗ್ ಕೆಲಸ ನಡೆಯುತ್ತಿದ್ದು, ಮದ್ದಡ್ಕದ ಫಾರೂಕ್ ಎಂಬವರು ಕುದ್ರಡ್ಕದ ಅಶ್ರಫ್ ಹಾಗೂ ಶಿರ್ಲಾಲಿನ ಸುಲೈಮಾನ್ ಅವರನ್ನು ಕರೆದುಕೊಂಡು ಬಂದು ಕೆಲಸ ಮಾಡಿಸಿದ್ದರು. ಇದೇ ವೇಳೆ ನೌಫಾಲ್ ಅವರ ತಮ್ಮ ಮಹಮ್ಮದ್ ನೌಷಾದ್ ಮನೆಯಲ್ಲಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾತ್ರಿ ಸುಮಾರು 8.30ಕ್ಕೆ ಕುಟುಂಬದೊಂದಿಗೆ ಮನೆಗೆ ವಾಪಸ್ ಬಂದಾಗ ಬೆಡ್‌ರೂಂನ ಕಪಾಟಿನಲ್ಲಿದ್ದ ಚಿನ್ನದ ಬಾಕ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದಾಗ 32 ಗ್ರಾಂ ಮತ್ತು 26 ಗ್ರಾಂ ತೂಕದ ಎರಡು ಚಿನ್ನದ ಸರಗಳು, ಮಗುವಿನ ಚಿನ್ನದ ಸರ, ಕಾಲುಚೈನು, ಬ್ರಾಸ್‌ಲೈಟ್ ಸೇರಿದಂತೆ 15.82 ಲಕ್ಷ ರೂ. ಮೌಲ್ಯದ ಒಟ್ಟು 113 ಗ್ರಾಂ ತೂಕದ ಚಿನ್ನಾಭರಣ ಹಾಗೂ 1.80 ಲಕ್ಷ ರೂ. ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.

ಇದಲ್ಲದೆ ನೌಫಾಲ್ ಅವರ ತಾಯಿಗೆ ಸೇರಿದ 7 ಗ್ರಾಂ ತೂಕದ ಮೂರು ಉಂಗುರಗಳು ಕೂಡ ಕಾಣೆಯಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮನೆಯಲ್ಲಿ ವಯರಿಂಗ್ ಕೆಲಸಕ್ಕೆ ಬಂದಿದ್ದ ಅಶ್ರಫ್, ಫಾರೂಕ್ ಹಾಗೂ ಸುಲೈಮಾನ್ ಅವರ ಮೇಲೆ ಅನುಮಾನವಿರುವುದಾಗಿ ನೌಫಾಲ್ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *