ಬಂಟ್ವಾಳ: ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ನೇ ಸಾಲಿನಲ್ಲಿ ಒಟ್ಟು ರೂ. ₹720.47 ಕೋಟಿ ವ್ಯವಹಾರ ನಡೆಸಿ ರೂ. ₹2,19,28,344.49 ಕೋಟಿ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ತಿಳಿಸಿದ್ದಾರೆ.

ಸಿದ್ದಕಟ್ಟೆಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1947 ರಲ್ಲಿ ಆಗಿನ ಸಹಕಾರಿ ಬಂಧುಗಳ ನೆರವಿನಿಂದ ಬಿ. ಕೃಷ್ಣ ರೈ ರವರ ಅಧ್ಯಕ್ಷತೆಯಲ್ಲಿ ಸ್ಥಾಪಿಸಲಾಗಿದ್ದು, ಸಂಘವು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮ ಸೇರಿದಂತೆ ಬಂಟ್ವಾಳ ತಾಲೂಕಿನ 7 ಗ್ರಾಮಗಳೊಂದಿಗೆ ಒಟ್ಟಾರೆ 8 ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡಿದ್ದು, ಆಡಳಿತ ಮಂಡಳಿಯ ನಿರ್ದೇಶಕರ, ಸಿಬ್ಬಂದಿಗಳ ಹಾಗೂ ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಎಲ್ಲರಿಗೂ ತೃಪ್ತಿಕರವಾದ ಸೇವೆಯನ್ನು ನೀಡುತ್ತಾ ಬಂದಿದ್ದು, ಕಳೆದ 79 ವರ್ಷಗಳಿಂದ ಕಾರ್ಯಚರಿಸುತ್ತಿದ್ದು, ಅಭಿವೃದ್ದಿಯಲ್ಲಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು.

2025-26ನೇ ಸಾಲಿನಲ್ಲಿ ವಿವಿಧ ಉದ್ದೇಶಗಳಿಗಾಗಿ ₹133.63 ಕೋಟಿ ಸಾಲ ವಿತರಿಸಲಾಗಿದ್ದು, ಹೊರ ಬಾಕಿ ಸಾಲವು ಶೇ.98ರಷ್ಟು ಸಾಲ ವಸೂಲಾತಿ ಸಾಧಿಸಲಾಗಿದೆ. ವರ್ಷಾಂತ್ಯಕ್ಕೆ ಸಂಘದಲ್ಲಿ ₹69.56 ಕೋಟಿ ಠೇವಣಿ ಇದ್ದು, ಹಲವು ವರ್ಷಗಳಿಂದ ಅಡಿಟ್‌ನಲ್ಲಿ ‘ಎ’ ಗ್ರೇಡ್ ಕಾಯ್ದುಕೊಂಡು ಬರಲಾಗಿದೆ ಎಂದು ಪ್ರಭಾಕರ ಪ್ರಭು ವಿವರಿಸಿದರು.

ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ 2025-26ನೇ ಸಾಲಿನಲ್ಲಿ 1,885 ರೈತರು 2,395.78 ಎಕರೆ ಜಮೀನಿಗೆ ₹62.62 ಲಕ್ಷ ಪ್ರೀಮಿಯಂ ಪಾವತಿಸಿದ್ದಾರೆ. ಹಿಂದಿನ ವರ್ಷ ಸಂಘದ ವ್ಯಾಪ್ತಿಯ ಸದಸ್ಯರು ಸುಮಾರು ₹5ರಿಂದ ₹6 ಕೋಟಿ ಬೆಳೆ ವಿಮೆ ಪರಿಹಾರ ಪಡೆದಿದ್ದಾರೆ. ಇದರಿಂದ ನಮ್ಮ ಸಂಘವು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿರುವ ಬೆರಳೆಣಿಕೆಯ ಸಹಕಾರಿ ಸಂಘಗಳಲ್ಲಿ ನಮ್ಮ ಸಂಘವು ಒಂದಾಗಿದೆ ಎಂದು ಅವರು ತಿಳಿಸಿದರು.

ಬೆಳೆ ಸಾಲ ಪಡೆದ ಸದಸ್ಯರು ಮೃತಪಟ್ಟ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಸಂಘವು ‘ರೈತ ಕಲ್ಯಾಣ ನಿಧಿ’ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯಡಿ ತಲಾ ₹10 ಸಾವಿರದಂತೆ 38 ಕುಟುಂಬಗಳಿಗೆ ಆರ್ಥಿಕ ನೆರವು ನೀಡಲಾಗಿದೆ.
ಸಂಘದ ಸದಸ್ಯರ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಹಾಗೂ ಸರ್ಕಾರಿ ಸೇವೆಯಿಂದ ನಿವೃತ್ತರಾದವರನ್ನು ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ಸಂಘದ ನ್ಯಾಯಬೆಲೆ ಅಂಗಡಿಯ ಮೂಲಕ ಪಡಿತರ ವಿತರಿಸಲಾಗುತ್ತಿದ್ದು, ‘ನೇತಾಜಿ ಬಹುಪಯೋಗಿ ಸೇವಾಕೇಂದ್ರ’ದ ಹೆಸರಿನಲ್ಲಿ ಗೋದಾಮು ಕಟ್ಟಡ ಇದ್ದು, ಇದರ ಮೂಲಕ ರಾಸಾಯನಿಕ ಹಾಗೂ ಸಾವಯವ ಗೊಬ್ಬರ, ಮೈಲುತ್ತುತ್ತು, ಸುಣ್ಣ ಸೇರಿದಂತೆ ಕೃಷಿ ಉಪಯುಕ್ತ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರ ಖರೀದಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯವೂ ನೀಡಲಾಗುತ್ತಿದೆ.

ಸಂಘವು ಸಿದ್ದಕಟ್ಟೆ ಪ್ರಧಾನ ಕಚೇರಿಯೊಂದಿಗೆ ಆರಂಬೋಡಿ, ರಾಯಿ, ಮಾವಿನಕಟ್ಟೆ ಹಾಗೂ ಅರಳದಲ್ಲಿ ನಾಲ್ಕು ಶಾಖೆಗಳನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ ಸಿಸಿ ಕ್ಯಾಮೆರಾ, ಸೈರನ್, RTGS, NEFT ಹಾಗೂ ಕ್ಯೂಆರ್ ಕೋಡ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
ಈ ಬಾರಿಯ ಮಹಾಸಭೆಯಲ್ಲಿ ‘ಪಂಚ ಪರಿವರ್ತನೆ’ ಕಲ್ಪನೆಯಡಿ ಪರಿಸರ ಸಂರಕ್ಷಣೆಗೆ ಒತ್ತು ನೀಡಲಾಗಿದ್ದು, ಸಂಘದ ಪ್ರತಿಯೊಬ್ಬ ಸದಸ್ಯರಿಗೂ ಹಲಸಿನ ಗಿಡ ವಿತರಿಸುವ ಮೂಲಕ ‘ಕಾಡು ಬೆಳೆಸಿ–ನಾಡು ಉಳಿಸಿ’ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.

ಸಂಘದ ಸ್ಥಾಪಕ ಅಧ್ಯಕ್ಷ ಬೆಳ್ಳಿಪ್ಪಾಡಿ ಕೃಷ್ಣ ರೈ ಅವರ ಸ್ಮರಣಾರ್ಥ ನಿರ್ಮಿಸಿರುವ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಚಿತವಾಗಿ ಬಳಸಲು ಅವಕಾಶ ಕಲ್ಪಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಪ್ರಭಾಕರ ಪ್ರಭು, ಉಪಾಧ್ಯಕ್ಷ ಸಂದೇಶ್ ಶೆಟ್ಟಿ ಪೊಡುಂಬ, ನಿರ್ದೇಶಕರಾದ ಸತೀಶ್ ಪೂಜಾರಿ, ದಿನೇಶ್ ಪೂಜಾರಿ, ರಶ್ಮಿತ್ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಜಾರಪ್ಪ ನಾಯ್ಕ, ವೀರಪ್ಪ ಪರವ, ವಿಶ್ವನಾಥ ಶೆಟ್ಟಿಗಾರ್, ಎ. ಶಿವ ಗೌಡ, ಮಂದಾರತಿ ಎಸ್. ಶೆಟ್ಟಿ, ಪುಷ್ಪಲತಾ ಎಸ್.ಆರ್., ಕೀರ್ತಿರಾಜ್, ವೃತ್ತಿಪರ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೆ., ನವೀನ್ ಹೆಗ್ಡೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟಿ, ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಲ್ಲಿಕಾ ಉಪಸ್ಥಿತರಿದ್ದರು.

ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.19ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಸಿದ್ದಕಟ್ಟೆ ಕೇಂದ್ರ ಕಚೇರಿಯ ಬೆಳ್ಳಿಪ್ಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ನಡೆಯಲಿದ್ದು, ಸಂಘದ ಎಲ್ಲಾ ಸದಸ್ಯರು ಭಾಗವಹಿಸುವಂತೆ ಅಧ್ಯಕ್ಷ ಪ್ರಭಾಕರ ಪ್ರಭು ಮನವಿ ಮಾಡಿದ್ದಾರೆ.


