Breaking
15 Sep 2026, Tue

ಮಡಂತ್ಯಾರು: ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

ಮಡಂತ್ಯಾರು: ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘ ನಿಯಮಿತದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಆವರಣದಲ್ಲಿ ಅಧ್ಯಕ್ಷ ರವಿರಾಜ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 10ರಂದು ನಡೆಯಿತು.

ಕಾರ್ಯಕ್ರಮವು ಶ್ರೀಮತಿ ಅಮಿತಾ ಅಶೋಕ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಬಾಲಕೃಷ್ಣ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. 2025-26ನೇ ಸಾಲಿನಲ್ಲಿ ಸಂಘವು ₹11,68,153.25 ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇ.65 ಬೋನಸ್ ಹಾಗೂ ಶೇ.25 ಡಿವಿಡೆಂಡ್ ನೀಡುವುದಾಗಿ ಸಭೆಯಲ್ಲಿ ಘೋಷಿಸಲಾಯಿತು.

ಸಭೆಯಲ್ಲಿ ಒಕ್ಕೂಟದ ವಿಸ್ತರಣಾಧಿಕಾರಿ ರಾಜೇಶ್ ಪಿ.ಕೆ. ಅವರು ಮಾತನಾಡಿ, ಹಾಲು ಉತ್ಪಾದಕರಿಗೆ ಒಕ್ಕೂಟದ ವತಿಯಿಂದ ದೊರೆಯುವ ವಿವಿಧ ಸೌಲಭ್ಯಗಳು, ಹಾಲಿನ ಗುಣಮಟ್ಟ, NDDB ಸಾಫ್ಟ್‌ವೇರ್, ನಂದಿನಿ ಪಶು ಆಹಾರ ಸೇರಿದಂತೆ ಹೈನುಗಾರಿಕೆಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡಿದರು. ಸಂಘದ ಪ್ರಗತಿಗೆ ಸದಸ್ಯರು ನಿರಂತರ ಸಹಕಾರ ನೀಡುವಂತೆ ಮನವಿ ಮಾಡಿದರು.

SCDCC ಬ್ಯಾಂಕ್ ಮಡಂತ್ಯಾರು ಶಾಖೆಯ ವ್ಯವಸ್ಥಾಪಕಿ ಸೌಮ್ಯ ಚಂದ್ರಹಾಸ್ ಅವರು ಸರ್ಕಾರದ ವಿವಿಧ ಯೋಜನೆಗಳಡಿ ಹೈನುಗಾರರಿಗೆ ದೊರೆಯುವ ಸಾಲ ಹಾಗೂ ವಿಮಾ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಸಂಘಕ್ಕೆ ಸಕ್ರಿಯವಾಗಿ ಹಾಲು ಪೂರೈಸುವ ಸದಸ್ಯರ ಮಕ್ಕಳಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪ್ರೋತ್ಸಾಹ’ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿ ಮುಂದಿನ ವಿದ್ಯಾಭ್ಯಾಸಕ್ಕೂ ಶುಭ ಹಾರೈಸಲಾಯಿತು.

ಅಧ್ಯಕ್ಷೀಯ ಭಾಷಣದಲ್ಲಿ ರವಿರಾಜ್ ಶೆಟ್ಟಿ ಅವರು ಸಂಘದ ಬೆಳವಣಿಗೆ, ಸದಸ್ಯರಿಗೆ ಹಾಗೂ ಹಾಲು ಒಕ್ಕೂಟದ ಮೂಲಕ ದೊರೆಯುತ್ತಿರುವ ವಿವಿಧ ಸೌಲಭ್ಯಗಳ ಕುರಿತು ವಿವರಿಸಿದರು. ಸಂಘದ ಅಭಿವೃದ್ಧಿಗೆ ಸಹಕರಿಸುತ್ತಿರುವ ನಿರ್ದೇಶಕರು, ಸಿಬ್ಬಂದಿ ಹಾಗೂ ಹಾಲು ಉತ್ಪಾದಕ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು.

ಸಭೆಯ ಅಂತ್ಯದಲ್ಲಿ ನಿರ್ದೇಶಕ ಪ್ರವೀಣ್ ಚಂದ್ರ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ಪ್ರಸಕ್ತ ಸಾಲಿನಲ್ಲಿ ಸಂಘಕ್ಕೆ ಹಾಲು ಪೂರೈಸುತ್ತಿರುವ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ವಿತರಿಸಲಾಯಿತು.

ಸದಸ್ಯರ ಸಕ್ರಿಯ ಸಹಕಾರ, ಉತ್ತಮ ಹಾಲು ಉತ್ಪಾದನೆ ಹಾಗೂ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಸಮನ್ವಯದ ಫಲವಾಗಿ ಸಂಘವು ಉತ್ತಮ ಆರ್ಥಿಕ ಸಾಧನೆ ಮಾಡಿರುವುದು ಸಭೆಯಲ್ಲಿ ಸಂತಸಕ್ಕೆ ಕಾರಣವಾಯಿತು.

ಸಭೆಯ ನಿರೂಪಣೆಯನ್ನು ಸಂಘದ ಹಾಲು ಪರೀಕ್ಷಕ ಹಾಗೂ ಗುಮಾಸ್ತ ಅಶೋಕ್ ಗುಂಡಿಯಲ್ಕೆ ನಿರ್ವಹಿಸಿದರು.

Leave a Reply

Your email address will not be published. Required fields are marked *