ಕಾರ್ಕಳ: ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ಮಾರ್ಗವಾಗಿರುವ ಆಗುಂಬೆ ಘಾಟಿಯ ರಸ್ತೆ ಅಭಿವೃದ್ಧಿಗೆ ಕೇಂದ್ರ ಸರ್ಕಾರ ₹18 ಕೋಟಿ ಅನುದಾನ ಬಿಡುಗಡೆ ಮಾಡಿದೆ.

ಆಗುಂಬೆ ಘಾಟಿಯ ಆಯ್ದ ಭಾಗಗಳಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಸೇರಿದಂತೆ ಆಗುಂಬೆಯಿಂದ ಹೆಬ್ರಿ ಪೇಟೆವರೆಗೆ ರಸ್ತೆ ಸುಧಾರಣೆ ಕಾಮಗಾರಿಗಳನ್ನು ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ವಿಭಾಗದ ಮೂಲಕ ಈ ಅನುದಾನ ಮಂಜೂರಾಗಿದೆ.

ಆಗುಂಬೆ ಘಾಟಿಯ ರಸ್ತೆ ಅಭಿವೃದ್ಧಿ ಹಾಗೂ ಕೆಲವೆಡೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ಸುಧಾರಣೆ ಕೈಗೊಳ್ಳುವಂತೆ ಈ ಹಿಂದೆ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಇದೀಗ ₹18 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.



