Breaking
13 Sep 2026, Sun

ಪುತ್ತೂರು ನಗರದಲ್ಲಿ ಎರಡು ಕಾಡುಕೋಣಗಳು ಪ್ರತ್ಯಕ್ಷ; ಸ್ಥಳೀಯರಲ್ಲಿ ಆತಂಕ

ಪುತ್ತೂರು: ಪುತ್ತೂರಿನ ದರ್ಬೆ ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳು ಪ್ರತ್ಯಕ್ಷಗೊಂಡಿದ್ದು, ವಾಹನ ಸವಾರರು ಹಾಗೂ ಬೆಳಗಿನ ನಡಿಗೆಗೆ ತೆರಳಿದ್ದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿರುವ ದುಗ್ಗಮ್ಮ–ದೇರಣ್ಣ ಶೆಟ್ಟಿ ಸಭಾಭವನದ ಬಳಿ ಶುಕ್ರವಾರ ಮುಂಜಾನೆ ಕಾಡುಕೋಣಗಳು ಕಾಣಿಸಿಕೊಂಡಿವೆ.

ಪಟ್ಟಣದ ಪ್ರಮುಖ ರಸ್ತೆಯಲ್ಲೇ ಎರಡು ಕಾಡುಕೋಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಹನ ಚಾಲಕರು, ಹಾಲಿನ ಡೈರಿ ಸಿಬ್ಬಂದಿ, ಪತ್ರಿಕೆ ವಿತರಕರು ಹಾಗೂ ಬೆಳಗಿನ ನಡಿಗೆಗೆ ತೆರಳಿದ್ದವರು ಕೆಲಕಾಲ ಭಯಭೀತರಾಗಿದ್ದರು.

ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಸಮೀಪದ ಅರಣ್ಯ ಪ್ರದೇಶದಿಂದ ದಾರಿ ತಪ್ಪಿ ಕಾಡುಕೋಣಗಳು ಪಟ್ಟಣ ಪ್ರದೇಶಕ್ಕೆ ಪ್ರವೇಶಿಸಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.

ಪಟ್ಟಣದ ವಸತಿ ಹಾಗೂ ವಾಣಿಜ್ಯ ಪ್ರದೇಶದಲ್ಲಿ ಕಾಡುಕೋಣಗಳು ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಅವುಗಳನ್ನು ಸುರಕ್ಷಿತವಾಗಿ ಕಾಡಿನತ್ತ ಓಡಿಸಲು ಅರಣ್ಯ ಇಲಾಖೆ ತಕ್ಷಣ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಅಲ್ಲದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ವಾಹನ ಸವಾರರು, ಪಾದಚಾರಿಗಳು ಹಾಗೂ ಸ್ಥಳೀಯ ನಿವಾಸಿಗಳ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *