ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಅನಿರೀಕ್ಷಿತ ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೆ.12ರಿಂದ ಪ್ರತಿ ಶನಿವಾರವೂ ಪೂರ್ಣ ದಿನ ತರಗತಿ ನಡೆಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೂಚನೆ ನೀಡಿದೆ.

ಈ ಮುಂಗಾರು ಅವಧಿಯಲ್ಲಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ನಿರಂತರ ಮಳೆಯಿಂದಾಗಿ ಜಿಲ್ಲಾಡಳಿತ 10ಕ್ಕೂ ಹೆಚ್ಚು ದಿನ ಶಾಲೆಗಳಿಗೆ ರಜೆ ಘೋಷಿಸಿತ್ತು. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದ್ದು, ಪಠ್ಯಕ್ರಮ ಪೂರ್ಣಗೊಳಿಸುವಲ್ಲಿಯೂ ಹಿನ್ನಡೆ ಉಂಟಾಗಿತ್ತು.
ಶೈಕ್ಷಣಿಕ ಹಿನ್ನಡೆಯನ್ನು ಸರಿದೂಗಿಸಲು ಶನಿವಾರದ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ನಡೆಸುವುದರ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ವಿಶೇಷ ಪರಿಹಾರ ತರಗತಿಗಳನ್ನು ಆಯೋಜಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ.

ಇದುವರೆಗೆ ಅರ್ಧ ದಿನ ನಡೆಯುತ್ತಿದ್ದ ಶನಿವಾರದ ತರಗತಿಗಳು ಸೆ.12ರಿಂದ ಪೂರ್ಣ ದಿನ ನಡೆಯಲಿವೆ. ಕಳೆದುಹೋದ ಬೋಧನಾ ಅವಧಿಯನ್ನು ಸರಿದೂಗಿಸಲು ಅಗತ್ಯಕ್ಕೆ ಅನುಗುಣವಾಗಿ ಉಳಿದ ಸಾಮಾನ್ಯ ರಜೆ ದಿನಗಳನ್ನು ಬಳಸಿಕೊಳ್ಳಲು ಶಾಲೆಗಳಿಗೆ ಅವಕಾಶ ನೀಡಲಾಗಿದೆ.

ಪ್ರತಿ ಶಾಲೆಯ ಆಡಳಿತ ಮಂಡಳಿಯು ತಮ್ಮ ಶಾಲೆಯ ಅಗತ್ಯಕ್ಕೆ ಅನುಗುಣವಾಗಿ ಪಠ್ಯಕ್ರಮ ಪೂರ್ಣಗೊಳಿಸಲು ವಿಶೇಷ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಬಹುದು. ಆದರೆ ಹೆಚ್ಚುವರಿ ತರಗತಿಗಳ ಹಾಜರಾತಿ, ತರಗತಿಗಳ ವಿವರ ಸೇರಿದಂತೆ ಸಂಬಂಧಿತ ದಾಖಲೆಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಇಲಾಖೆ ತಿಳಿಸಿದೆ.
ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಸರ್ಕಾರಿ ಹಾಗೂ ಖಾಸಗಿ ಶಾಲೆಗಳು ಪರಿಷ್ಕೃತ ಶೈಕ್ಷಣಿಕ ವೇಳಾಪಟ್ಟಿಯ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮಾಹಿತಿ ನೀಡಿವೆ.


