Breaking
12 Sep 2026, Sat

ಸೆ.14ರಿಂದ 18ರವರೆಗೆ ಜಕ್ರಿಬೆಟ್ಟಿನಲ್ಲಿ ಅದ್ದೂರಿ ‘ಬಂಟ್ವಾಳದ ಹಬ್ಬ’ ಗಣೇಶೋತ್ಸವ

ಬಂಟ್ವಾಳ: ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ಜಕ್ರಿಬೆಟ್ಟು, ಬಂಟ್ವಾಳ ಇದರ ನೇತೃತ್ವದಲ್ಲಿ 23ನೇ ವರ್ಷದ ಶ್ರೀ ಗಣೇಶೋತ್ಸವವು ಸೆ.14ರಿಂದ 18ರವರೆಗೆ ಜಕ್ರಿಬೆಟ್ಟು ಬೈಪಾಸ್‌ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಮಾಜಿ ಸಚಿವ ಹಾಗೂ ಸಮಿತಿಯ ಗೌರವಾಧ್ಯಕ್ಷ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತದ ಸುತ್ತೋಲೆ ಹಾಗೂ ಕಾನೂನು ಸುವ್ಯವಸ್ಥೆಯ ನಿಯಮಗಳನ್ನು ಪಾಲಿಸಿಕೊಂಡು ಗಣೇಶೋತ್ಸವವನ್ನು ಶಿಸ್ತಿನಿಂದ ಆಯೋಜಿಸಲಾಗುವುದು ಎಂದರು.

ಬಂಟ್ವಾಳದ ಗಣೇಶೋತ್ಸವವು ಯಾವುದೇ ಜಾತಿ, ಮತ, ಧರ್ಮಕ್ಕೆ ಸೀಮಿತವಾಗದೆ ಸರ್ವಧರ್ಮೀಯರನ್ನು ಒಗ್ಗೂಡಿಸುವ ವಿಶಿಷ್ಟ ಉತ್ಸವವಾಗಿ ಬೆಳೆದಿದೆ. ಎಲ್ಲರೂ ಒಂದಾಗಿ ಬೆಸೆಯುವ ಸೌಹಾರ್ದತೆಯ ಸಮ್ಮೇಳನವಾಗಿ ಇದು ‘ಬಂಟ್ವಾಳದ ಹಬ್ಬ’ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ಅವರು ಹೇಳಿದರು.

ಸಾಮಾಜಿಕ ಸಾಮರಸ್ಯ ಹಾಗೂ ಸಹಬಾಳ್ವೆಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ಮನುಷ್ಯ-ಮನುಷ್ಯರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಬಂಟ್ವಾಳದ ಗಣೇಶೋತ್ಸವವು ಸಾಮರಸ್ಯದ ಬಂಟ್ವಾಳ ನಿರ್ಮಾಣಕ್ಕೆ ಪೂರಕವಾದ ನಾಡಹಬ್ಬವಾಗಿ ಮುಂದುವರಿಯಬೇಕು ಎಂಬುದು ನಮ್ಮ ಆಶಯ ಎಂದು ರಮಾನಾಥ ರೈ ತಿಳಿಸಿದರು.

ಗಣೇಶೋತ್ಸವವು ಬಂಟ್ವಾಳದ ಸಮಸ್ತ ಜನತೆಯ ಉತ್ಸಾಹ-ಉಲ್ಲಾಸದ ಮಹೋತ್ಸವವಾಗಿದ್ದು, ಇದುವರೆಗೆ ನಡೆದ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳೊಂದಿಗೆ ವೈಭವದ ಶೋಭಾಯಾತ್ರೆ ಜನಮಾನಸದಲ್ಲಿ ಹಚ್ಚಹಸಿರಾಗಿದೆ ಎಂದು ಅವರು ತಿಳಿಸಿದರು.

ಸೆ.14ರಂದು ಬೆಳಗ್ಗೆ 10ರಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗಣೇಶ ವಿಗ್ರಹ ಪ್ರತಿಷ್ಠೆ ನಡೆಯಲಿದೆ. ಬಳಿಕ ವೈದ್ಯ ಡಾ. ಶಿವಪ್ರಸಾದ್ ರೈ, ಮಂಗಳೂರು ಅವರು ಗಣೇಶೋತ್ಸವ ಉದ್ಘಾಟಿಸಲಿದ್ದು, ಸೊಲೂರು ಮಠದ ಶ್ರೀ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಮಧ್ಯಾಹ್ನ 12.05ಕ್ಕೆ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ ‘ನೃತ್ಯ ಸಿಂಚನ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸೆ.15ರಂದು ವೈದಿಕ ಕಾರ್ಯಕ್ರಮ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಮಧ್ಯಾಹ್ನ 1ಕ್ಕೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ 7ಕ್ಕೆ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ.

ಸೆ.16ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮ ಹಾಗೂ ಭಜನೆ, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಾಜಿ ಸಚಿವ ವಿಜಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ.

ಬಳಿಕ ಭಜನಾ ಕಾರ್ಯಕ್ರಮ, ರಾತ್ರಿ 7ಕ್ಕೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಅಮ್ಮ ಕಲಾವಿದರು ಕುಡ್ಲ ತಂಡದಿಂದ ‘ಚಿ.ಸೌ. ಸುಮಂಗಲಾ’ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.

ಸೆ.17ರಂದು ವೈದಿಕ ಕಾರ್ಯಕ್ರಮ, ಭಜನೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಕಾವೂರು ಆದಿಚುಂಚನಗಿರಿ ಮಠದ ಶ್ರೀ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಲೊರೆಟ್ಟೊ ಚರ್ಚ್ ಧರ್ಮಗುರು ವಂ. ಜೇಮ್ಸ್ ಡಿಸೋಜ ಸೇರಿದಂತೆ ಗಣ್ಯರು ಉಪಸ್ಥಿತರಿರಲಿದ್ದಾರೆ.

ಮಧ್ಯಾಹ್ನ ‘ಜಾಂವತೀ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಬಳಿಕ ಲಕುಮಿ ತಂಡದಿಂದ ‘ಚಂದ್ರಾವತಿ’ ತುಳು ಹಾಸ್ಯ ನಾಟಕ ನಡೆಯಲಿದೆ.

ಸೆ.18ರಂದು ಬೆಳಗ್ಗೆ ವೈದಿಕ ಕಾರ್ಯಕ್ರಮ, ಗಣಹೋಮ, ಭಜನೆ, ಪೂರ್ಣಾಹುತಿ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ ನಾಡಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಇಂದ್ರಜಿತು ಕಾಳಗ–ಕುಶಲವ’ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ ಸಂಧ್ಯಾಪೂಜೆ, ವಿಸರ್ಜನಾ ಪೂಜೆ ಹಾಗೂ ಪ್ರಾರ್ಥನೆಯ ಬಳಿಕ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ್ ಜೈನ್, ಉಪಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸಂಪತ್ ಕುಮಾರ್ ಶೆಟ್ಟಿ, ಮೋಹನ್ ಚೆಂಡ್ತಿಮಾರ್, ಕಾರ್ಯದರ್ಶಿಗಳಾದ ಬೇಬಿಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಕೃಷ್ಣ ಆರ್.ಅಂಚನ್, ಪಿಯೂಸ್ ಎಲ್.ರೊಡ್ರಿಗಸ್, ಚಂದ್ರಶೇಖರ ಭಂಡಾರಿ, ಸುರೇಶ್ ಪೂಜಾರಿ ಜಕ್ರಿಬೆಟ್ಟು, ಪದ್ಮನಾಭ ರೈ, ಪ್ರವೀಣ್ ಜಕ್ರಿಬೆಟ್ಟು, ದೇವಪ್ಪ ಕುಲಾಲ್ ಪಂಜಿಕಲ್ಲು, ಸದಾಶಿವ ಬಂಗೇರ, ಸುಧಾಕರ ಶೆಣೈ ಖಂಡಿಗ, ಮನೋಹರ ನೆರಂಬೊಳು, ಸುವರ್ಣ ಜೈನ್, ಮಾಣಿಕ್ಯ ರಾಜ್ ಜೈನ್, ಅಶೋಕ್ ಭಂಡಾರಿ, ಸಂತೋಷ್ ಪೂಜಾರಿ, ಆದೇಶ್ ಕುಮಾರ್ ಜೈನ್, ಜಿ.ಎ.ಇಕ್ಬಾಲ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *