Breaking
11 Sep 2026, Fri

ಬಂಟ್ವಾಳ ನಗರ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ: 23 ತಂಡಗಳ ಭಾಗಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಬಿ.ಸಿ.ರೋಡಿನ ಬಿ.ಮೂಡ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ 14ರ ವಯೋಮಾನದ ಬಾಲಕ–ಬಾಲಕಿಯರ ಬಂಟ್ವಾಳ ನಗರ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಶುಕ್ರವಾರ ನಡೆಯಿತು.

ಬಿ.ಮೂಡ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ನಡೆದ ಪಂದ್ಯಾಟವನ್ನು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಶಿಕ್ಷಣದ ಜೊತೆಗೆ ಕ್ರೀಡೆಯೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿದೆ. ಗೆಲುವು–ಸೋಲು ಸಹಜವಾಗಿದ್ದು, ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಅನುಭವ ಹಾಗೂ ಆತ್ಮವಿಶ್ವಾಸ ದೊರೆಯುತ್ತದೆ. ತಾಲೂಕು ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ತಾನು ಕ್ರೀಡಾಪಟುವಾಗಿ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಎಳವೆಯಲ್ಲೇ ಶಿಸ್ತು, ಸಂಯಮ ಹಾಗೂ ಛಲವನ್ನು ಬೆಳೆಸಿಕೊಂಡರೆ ಕ್ರೀಡೆಯಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೂ ಏರಲು ಸಾಧ್ಯ ಎಂದರು.

ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್ ಮಾತನಾಡಿ, ಮಳೆಯ ಕಾರಣದಿಂದ ಮುಂದೂಡಲ್ಪಟ್ಟಿದ್ದ ಪಂದ್ಯಾಟ ಇದೀಗ ನಡೆಯುತ್ತಿದ್ದು, ಕ್ರೀಡಾಕೂಟದ ಯಶಸ್ಸಿಗೆ ಎಲ್ಲರ ಸಹಕಾರ ದೊರೆತಿದೆ ಎಂದರು.

ಲಯನ್ಸ್ ಕ್ಲಬ್ ಬಂಟ್ವಾಳದ ಮಾಜಿ ಅಧ್ಯಕ್ಷ ಪ್ರಶಾಂತ್ ಕೋಟ್ಯಾನ್ ವಾಲಿಬಾಲ್ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಬಿ.ಮೂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ವಿನೋದಾ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಗಣೇಶ್ ಕಾಮಾಜೆ, ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್ ರೈ, ಗ್ರೇಡ್–1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ರೈ, ನೋಡೆಲ್ ಶಿಕ್ಷಕರಾದ ಜಯಂತ್ ಪೊಳಲಿ, ಚಂದ್ರಹಾಸ ಶೆಟ್ಟಿ, ಬಿ.ಮೂಡ ಅಜ್ಜಿಬೆಟ್ಟು ಸರಕಾರಿ ಹೈಸ್ಕೂಲ್ ಮುಖ್ಯ ಶಿಕ್ಷಕಿ ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಇಸಿಒಗಳಾದ ರಮಾನಂದ, ಪ್ರತಿಮಾ, ಎಸ್‌ಡಿಎಂಸಿ ಉಪಾಧ್ಯಕ್ಷ ಶಶಿಧರ್ ಕೈಕುಂಜೆ, ಸದಸ್ಯರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಲಕ್ಷ್ಮೀ ಸ್ವಾಗತಿಸಿದರು. ಶಿವಮೂರ್ತಿ ಆರ್. ವಂದಿಸಿದರು. ಶಿಕ್ಷಕಿ ಸುಶೀಲಾ ಲಿಂಗಪ್ಪ ಕಾರ್ಯಕ್ರಮ ನಿರ್ವಹಿಸಿದರು.

ನಗರ ವಲಯದ ವಿವಿಧ ಶಾಲೆಗಳ 23 ತಂಡಗಳು ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದವು.

Leave a Reply

Your email address will not be published. Required fields are marked *