Breaking
10 Sep 2026, Thu

ಸಿದ್ದಕಟ್ಟೆಗೆ 108 ಆಂಬುಲೆನ್ಸ್ ಸೇವೆ ಮರು ಆರಂಭಕ್ಕೆ ಒತ್ತಾಯ: ಪ್ರಭಾಕರ ಪ್ರಭು

ಬಂಟ್ವಾಳ: ಸಿದ್ದಕಟ್ಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ತುರ್ತು ಆರೋಗ್ಯ ಸೇವೆಗೆ ಅನುಕೂಲವಾಗಿದ್ದ 108 ಆಂಬುಲೆನ್ಸ್ ಸೇವೆಯನ್ನು ಮರು ಆರಂಭಿಸಬೇಕೆಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 12 ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಹಾಗೂ ಸಿದ್ದಕಟ್ಟೆಗೆ 108 ಆಂಬುಲೆನ್ಸ್ ವಾಹನಗಳನ್ನು ಒದಗಿಸಲಾಗಿತ್ತು.

ಸಿದ್ದಕಟ್ಟೆಯಲ್ಲಿ ಸೇವೆ ನೀಡುತ್ತಿದ್ದ ಆಂಬುಲೆನ್ಸ್‌ನಿಂದ ಸುತ್ತಮುತ್ತಲಿನ 10–12 ಗ್ರಾಮಗಳ ಗ್ರಾಮೀಣ ಪ್ರದೇಶದ ಜನರಿಗೆ ಅಪಘಾತ, ಅನಾರೋಗ್ಯ ಹಾಗೂ ಇತರ ತುರ್ತು ಸಂದರ್ಭಗಳಲ್ಲಿ ದೂರದ ಆಸ್ಪತ್ರೆಗಳಿಗೆ ತೆರಳಲು ಸಾಕಷ್ಟು ಅನುಕೂಲವಾಗುತ್ತಿತ್ತು.

ಆದರೆ ಇತ್ತೀಚೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಸ್ಪಷ್ಟ ಕಾರಣ ನೀಡದೆ ಸಿದ್ದಕಟ್ಟೆಯಲ್ಲಿದ್ದ 108 ಆಂಬುಲೆನ್ಸ್ ಅನ್ನು ಬೇರೆಡೆಗೆ ವರ್ಗಾಯಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರೂ ಸಮರ್ಪಕ ಉತ್ತರ ದೊರೆಯುತ್ತಿಲ್ಲ. 108 ಆಂಬುಲೆನ್ಸ್ ಸಿಬ್ಬಂದಿಯನ್ನು ವಿಚಾರಿಸಿದಾಗ ಸಿಬ್ಬಂದಿ ಕೊರತೆಯ ಸಮಸ್ಯೆಯನ್ನು ತಿಳಿಸುತ್ತಿದ್ದಾರೆ ಎಂದು ಪ್ರಭಾಕರ ಪ್ರಭು ತಿಳಿಸಿದ್ದಾರೆ.

ಆಂಬುಲೆನ್ಸ್ ಸೇವೆ ಇಲ್ಲದಿರುವುದರಿಂದ ಸಿದ್ದಕಟ್ಟೆ ಸುತ್ತಮುತ್ತಲಿನ 12–15 ಗ್ರಾಮಗಳ ಜನರು ತುರ್ತು ಸಂದರ್ಭಗಳಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ತುರ್ತು ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಲಭ್ಯವಾಗದೆ ಜೀವಹಾನಿ ಸಂಭವಿಸಿದ ಪ್ರಕರಣಗಳೂ ಇವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸಿದ್ದಕಟ್ಟೆಗೆ ಈ ಹಿಂದೆ ಒದಗಿಸಲಾಗಿದ್ದ 108 ಆಂಬುಲೆನ್ಸ್ ಸೇವೆಯನ್ನು ತಕ್ಷಣ ಮರು ಆರಂಭಿಸಿ, ಗ್ರಾಮೀಣ ಭಾಗದ ಜನರಿಗೆ ತುರ್ತು ಆರೋಗ್ಯ ಸೇವೆ ಲಭ್ಯವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪ್ರಭಾಕರ ಪ್ರಭು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *