Breaking
10 Sep 2026, Thu

ನಿವೃತ್ತ ಸೌಲಭ್ಯ ಪಾವತಿಗೆ ವಿಳಂಬ ಆರೋಪ: ಶಿರ್ಲಾಲು ಸಹಕಾರಿ ಸಂಘದ ಎದುರು ಧರಣಿಗೆ ನಿರ್ಧಾರ

ಬೆಳ್ತಂಗಡಿ: ನಿವೃತ್ತ ಸೌಲಭ್ಯಗಳನ್ನು ಪಾವತಿಸಲು ಆಡಳಿತ ಮಂಡಳಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ, ಸುಲ್ಕೇರಿ ಮೊಗ್ರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮ್ಮಾಜಿ ಕೋಟ್ಯಾನ್ ಅವರು ಕುಟುಂಬ ಸಮೇತ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಶಿರ್ಲಾಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿ ಕಳೆದ ಐದು ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಮ್ಮಾಜಿ ಕೋಟ್ಯಾನ್, ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಸಂಸ್ಥೆಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸರಕಾರದ ನಿಯಮದಂತೆ ವಯೋಸಹಜ ನಿವೃತ್ತಿ ಹೊಂದಿದ ಬಳಿಕ ಕುಟುಂಬದೊಂದಿಗೆ ಜೀವನ ನಡೆಸುತ್ತಿದ್ದು, ನಿವೃತ್ತ ಜೀವನಕ್ಕೆ ಆಧಾರವಾಗಬೇಕಿದ್ದ ಸೌಲಭ್ಯಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಇದುವರೆಗೆ ಪಾವತಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಹಲವು ಬಾರಿ ಆಡಳಿತ ಮಂಡಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಮಾಜದ ಗಣ್ಯರ ಸಮ್ಮುಖದಲ್ಲಿಯೂ ಮಾತುಕತೆ ನಡೆದಿದ್ದರೂ ನಿವೃತ್ತ ಸೌಲಭ್ಯಗಳನ್ನು ಪಾವತಿಸಲು ಆಡಳಿತ ಮಂಡಳಿ ಒಪ್ಪಿಲ್ಲ. ಮಕ್ಕಳ ಉನ್ನತ ಶಿಕ್ಷಣದ ಸಂದರ್ಭದಲ್ಲಿ ನಿವೃತ್ತ ಸೌಲಭ್ಯ ದೊರೆಯದಿರುವುದರಿಂದ ಮಾನಸಿಕವಾಗಿ ನೊಂದಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀರಿದೆ ಎಂದು ಅಮ್ಮಾಜಿ ಕೋಟ್ಯಾನ್ ತಿಳಿಸಿದ್ದಾರೆ.

ನ್ಯಾಯಕ್ಕಾಗಿ ಸೆ. 10ರಂದು ಬೆಳಗ್ಗೆ 10.30ಕ್ಕೆ ಶಿರ್ಲಾಲು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಎದುರು ಕುಟುಂಬ ಸಮೇತ ಧರಣಿ ನಡೆಸುವುದಾಗಿ ಅವರು ತಿಳಿಸಿದ್ದಾರೆ. ಆಡಳಿತ ಮಂಡಳಿಯಿಂದ ಅನ್ಯಾಯಕ್ಕೊಳಗಾಗಿರುವ ಮತ್ತೋರ್ವ ಸಿಬ್ಬಂದಿ ಪ್ರಭಾಕರ ಎನ್. ಕೂಡ ಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಮ್ಮ ನ್ಯಾಯಪರ ಹೋರಾಟಕ್ಕೆ ಬೆಳ್ತಂಗಡಿ ತಾಲೂಕಿನ ಮಾಧ್ಯಮ ಪ್ರತಿನಿಧಿಗಳು ಬೆಂಬಲ ಹಾಗೂ ಸಹಕಾರ ನೀಡಬೇಕೆಂದು ಅಮ್ಮಾಜಿ ಕೋಟ್ಯಾನ್ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *