Breaking
11 Sep 2026, Fri

ಮಹಿಳೆಯರ ಸ್ವಾವಲಂಬನೆಗೆ ಉಚಿತ ಟೈಲರಿಂಗ್ ತರಬೇತಿ: ಉಜಿರೆಯಲ್ಲಿ 38ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರಕ್ಕೆ ಚಾಲನೆ

ಉಜಿರೆ: ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಸೇವಾಭಾರತಿ (ರಿ.), ಕನ್ಯಾಡಿ ಇದರ ನೇತೃತ್ವದಲ್ಲಿ ಸಬಲಿನಿ ಯೋಜನೆಯಡಿ 38ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರಕ್ಕೆ ಉಜಿರೆಯಲ್ಲಿ ಚಾಲನೆ ನೀಡಲಾಯಿತು.


ಲಯನ್ಸ್ ಕ್ಲಬ್ ಬೆಳ್ತಂಗಡಿ, ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ (ರಿ.), ಮಹಾತ್ಮಾ ಗಾಂಧಿ ಗ್ರಾಮ ಪಂಚಾಯತ್ ಉಜಿರೆ ಹಾಗೂ ಶ್ರೀ ದುರ್ಗಾಮಾತೃ ಮಂಡಳಿ, ಕನ್ಯಾಡಿ ಸಹಭಾಗಿತ್ವದಲ್ಲಿ ಸೆ.10ರಂದು ಉಜಿರೆ ಗ್ರಾಮ ಪಂಚಾಯತ್ನ ಸಂಜೀವಿನಿ ಕಟ್ಟಡದಲ್ಲಿ ಶಿಬಿರದ ಉದ್ಘಾಟನಾ ಸಮಾರಂಭ ನಡೆಯಿತು.


ಕಾರ್ಯಕ್ರಮವನ್ನು ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಘುರಾಮ ಶೆಟ್ಟಿ ‘ಸಾಧನಾ’ ಉದ್ಘಾಟಿಸಿ ಮಾತನಾಡಿ, ಟೈಲರಿಂಗ್ ತರಬೇತಿ ಕೇವಲ ಒಂದು ಕಲೆ ಮಾತ್ರವಲ್ಲ. ಇದು ಸ್ವಯಂ ಉದ್ಯೋಗ ಹಾಗೂ ಆರ್ಥಿಕ ಸಬಲೀಕರಣಕ್ಕೆ ಉತ್ತಮ ಅವಕಾಶವಾಗಿದೆ. ತರಬೇತಿಯ ಮೂಲಕ ಹೊಸ ಕೌಶಲ್ಯಗಳನ್ನು ಕಲಿತು ಮಹಿಳೆಯರು ಸ್ವಾವಲಂಬಿಗಳಾಗಬೇಕು ಎಂದು ಶುಭ ಹಾರೈಸಿದರು.


ಸೇವಾಭಾರತಿ ಅಧ್ಯಕ್ಷ ಹಾಗೂ ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್ ಮಾತನಾಡಿ, ಯಶಸ್ಸಿಗೆ ದೊಡ್ಡ ಅವಕಾಶಗಳಿಗಿಂತಲೂ ಕಲಿಯುವ ಮನಸ್ಸು ಹಾಗೂ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಮುಖ್ಯ. ಈ ತರಬೇತಿಯನ್ನು ಉತ್ತಮ ಅವಕಾಶವಾಗಿ ಬಳಸಿಕೊಂಡು ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಮಾತನಾಡಿ, ಮಹಿಳೆಯರು ಸ್ವಾವಲಂಬನೆ ಹಾಗೂ ಉದ್ಯಮಶೀಲತೆಯತ್ತ ಸಾಗಲು ಪಂಚಾಯತ್ ವತಿಯಿಂದ ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಮುಂದೆಯೂ ತಮ್ಮ ಸಂಪೂರ್ಣ ಬೆಂಬಲ ಇರಲಿದೆ ಎಂದು ತಿಳಿಸಿದರು.


ಕಾರ್ಯಕ್ರಮದಲ್ಲಿ ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ್ ಗೌಡ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಅಮಿತಾನಂದ ಹೆಗ್ಡೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಪುಷ್ಪವತಿ, ಬೆಳ್ತಂಗಡಿ ತಾಲೂಕು ಕೃಷಿಯೇತರ ವ್ಯವಸ್ಥಾಪಕ ನಿತೀಶ್ ಉಜಿರೆ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಕನ್ಯಾಡಿ ಶ್ರೀ ದುರ್ಗಾಮಾತೃ ಮಂಡಳಿ ಅಧ್ಯಕ್ಷೆ ಮಮತಾ ಬಿ. ಹಾಗೂ ಟೈಲರಿಂಗ್ ತರಬೇತುದಾರೆ ಲಲಿತ ಉಪಸ್ಥಿತರಿದ್ದರು.


ಶಿಬಿರದಲ್ಲಿ ಒಟ್ಟು 66 ಮಂದಿ ಮಹಿಳಾ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಬೆಳ್ತಂಗಡಿ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಶಾಶ್ವಿತ ಸ್ವಾಗತಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಭಾಗೀರಥಿ ಧನ್ಯವಾದ ಸಲ್ಲಿಸಿದರು.

Leave a Reply

Your email address will not be published. Required fields are marked *