ಉಡುಪಿ: ಸರ್ಕಾರಿ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಸ್ಫೋಟಕ ವಸ್ತುಗಳನ್ನು ಬಳಸಿ ಬಂಡೆ ಕಲ್ಲು ಸ್ಫೋಟಿಸಿದ ಆರೋಪದ ಮೇಲೆ ಮಣಿಪಾಲ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ತೋಡಿಕರ್ಮಾರ್ ನಿವಾಸಿ ಕೆ. ಗೋವಿಂದ ರಾಜ್ (40) ಹಾಗೂ ವಿಜಯಪುರ ಮೂಲದ, ಕಲ್ಯಾ ಹಾಳೆಕಟ್ಟೆ ನಿವಾಸಿ ಶೇಖಪ್ಪ ಚಲವಾದಿ (28) ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 5ರಂದು ಮರ್ಣೆ ಗ್ರಾಮದ ಕುಕ್ಕಿಪಲ್ಕೆಯಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಸ್ಫೋಟಕ ವಸ್ತುಗಳನ್ನು ಬಳಸಿ ಬಂಡೆ ಕಲ್ಲು ಸ್ಫೋಟಿಸಲಾಗಿದೆ ಎಂಬ ಆರೋಪದ ಮೇರೆಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಮಣಿಪಾಲ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್. ಅವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಟ್ರ್ಯಾಕ್ಟರ್, ಡ್ರಿಲ್ಲಿಂಗ್ ಯಂತ್ರ ಹಾಗೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.




