Breaking
13 Sep 2026, Sun

ಮೂಲ್ಕಿ ದೈವಸ್ಥಾನ ಕಳವು ಪ್ರಕರಣ: ಐದನೇ ಆರೋಪಿ ಬಂಧನ

ಮೂಲ್ಕಿ: ಕಿಲ್ಪಾಡಿ ಗ್ರಾಮದ ಆದಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಂಡೇಲಿಯ ಮೌಲಾಲಿ ಜಮಾಧಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಆರೋಪಿಗಳ ವಿಚಾರಣೆ ವೇಳೆ ಮೂಲ್ಕಿಯ ಕೊರ್ದಬ್ಬು ದೈವಸ್ಥಾನ ಹಾಗೂ ಉಳ್ಳಾಲದ ದೇವಸ್ಥಾನದಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ದಾವಣಗೆರೆಗೆ ಸಾಗಿಸಿ ಅಲ್ಲಿ ಕರಗಿಸಲಾಗಿತ್ತು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಬಳಿಕ ಕರಗಿಸಿದ ಚಿನ್ನವನ್ನು ವಿವಿಧ ಚಿನ್ನಾಭರಣ ಮಳಿಗೆಗಳಿಗೆ ಮಾರಾಟ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರಗಿಸಲಾಗಿದ್ದ ಚಿನ್ನಾಭರಣ ಸೇರಿದಂತೆ ಒಟ್ಟು 17.20 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತ ಮೌಲಾಲಿ ಜಮಾಧಾರ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ ಮೂಲ್ಕಿಯಲ್ಲಿ ಜಾಹೀದ್ ಸಿನಾನ್ (36) ಹಾಗೂ ಯಾಸೀನ್ (36), ದಾವಣಗೆರೆಯಲ್ಲಿ ಮಹಮದ್ ಅಫ್ರಿದಿ (26) ಮತ್ತು ಎಸ್.ಕೆ. ಅಬ್ದುಲ್ ಜುಮ್ಮಾನ್ (26) ಎಂಬವರನ್ನು ಪೊಲೀಸರು ಬಂಧಿಸಿದ್ದರು.

ಕಳವು ಮಾಡಿದ ಚಿನ್ನಾಭರಣಗಳನ್ನು ದಾವಣಗೆರೆಗೆ ಕೊಂಡೊಯ್ದು ಕರಗಿಸುವ ಮೂಲಕ ಅವುಗಳ ಮೂಲ ಪತ್ತೆಯಾಗದಂತೆ ಮಾಡಲು ಆರೋಪಿಗಳು ಪ್ರಯತ್ನಿಸಿದ್ದರು ಎನ್ನಲಾಗಿದೆ. ನಂತರ ಕರಗಿಸಿದ ಚಿನ್ನವನ್ನು ವಿವಿಧ ಅಂಗಡಿಗಳಿಗೆ ಮಾರಾಟ ಮಾಡಲಾಗಿತ್ತು. ತನಿಖೆ ಮುಂದುವರಿಸಿರುವ ಪೊಲೀಸರು ಮಾರಾಟವಾಗಿದ್ದ ಚಿನ್ನಾಭರಣಗಳನ್ನೂ ಜಪ್ತಿ ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *