ಮೂಲ್ಕಿ: ಕೊಲ್ನಾಡು ಬೆಳ್ಳಾಯರು ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ಮಾಡಿದ ಆರೋಪಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಕಳವು ಮಾಡಿದ್ದ 2,195 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತನನ್ನು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ನಿವಾಸಿ ರವಿಕುಮಾರ್ ಅಲಿಯಾಸ್ ರವಿ ಎಚ್.ಜಿ. (20) ಎಂದು ಗುರುತಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ಸೆ.1ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆ.18ರ ಮಧ್ಯರಾತ್ರಿ ಆರೋಪಿ ದೇವಸ್ಥಾನದ ಮೇಲ್ಛಾವಣಿಯ ಜಾಲರಿ ಮೂಲಕ ಹಗ್ಗದ ನೆರವಿನಿಂದ ಒಳ ಪ್ರವೇಶಿಸಿದ್ದಾನೆ. ಬಳಿಕ ದೇವಸ್ಥಾನದಲ್ಲಿದ್ದ ಸಿಸಿ ಕ್ಯಾಮೆರಾವನ್ನು ತಿರುಗಿಸಿ, ಕಾಣಿಕೆ ಹುಂಡಿಯ ಬೀಗ ಮುರಿದು ಹಣ ಕಳವು ಮಾಡಿದ್ದಾನೆ ಎನ್ನಲಾಗಿದೆ. ನಂತರ ಪರಿವಾರ ದೇವರ ಗುಡಿಯೊಳಗೆ ತೆರಳಿ ಮೂರ್ತಿಯ ಹಿಂದೆ ಅಡಗಿ ಕುಳಿತಿದ್ದನು.

ದೇವಸ್ಥಾನದ ಸಿಸಿ ಕ್ಯಾಮೆರಾದ ಲೈವ್ ಮಾನಿಟರಿಂಗ್ ಮಾಡುತ್ತಿದ್ದ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಸಂಸ್ಥೆಯ ಸಿಬ್ಬಂದಿ ದೇವಾಲಯದ ಆವರಣದಲ್ಲಿ ಆರೋಪಿಯ ಚಲನವಲನ ಗಮನಿಸಿ ತಕ್ಷಣ ಪೊಲೀಸರಿಗೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಮೂಲ್ಕಿ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿ, ಕಳವು ಮಾಡಿದ್ದ 2,195 ರೂ. ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ತನಿಖೆಯಲ್ಲಿ ಆರೋಪಿಯ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಐದು ಕಳವು ಪ್ರಕರಣಗಳು ಹಾಗೂ ತಿರುಪತಿ ಪೊಲೀಸ್ ಠಾಣೆಯಲ್ಲೂ ಒಂದು ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ.


