Breaking
21 Aug 2026, Fri

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ನೈತಿಕ ಶಿಕ್ಷಣ ಮತ್ತು ಕಾನೂನು ಅರಿವು ಕಾರ್ಯಕ್ರಮ

ಬೆಳ್ತಂಗಡಿ: ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತು ಬೆಳ್ತಂಗಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಬೆಳಾಲು ಇವುಗಳ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ‘ನೈತಿಕ ಶಿಕ್ಷಣ ಮತ್ತು ಕಾನೂನು ಅರಿವು’ ಕಾರ್ಯಕ್ರಮ ಆ.18ರಂದು ನಡೆಯಿತು.

ಕಾರ್ಯಕ್ರಮವನ್ನು ಶ್ರೀ ಧ.ಮಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿವಾ ಕೊಕ್ಕಡ ಉದ್ಘಾಟಿಸಿ ಮಾತನಾಡಿ, ಕೇವಲ ಅಂಕಗಳನ್ನು ಗಳಿಸುವುದು ಅಥವಾ ಪದವಿ ಪಡೆಯುವುದು ಮಾತ್ರ ಶಿಕ್ಷಣವಲ್ಲ. ಉತ್ತಮ ಚಾರಿತ್ರ್ಯ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ. ಜೀವನದಲ್ಲಿ ಶಾಂತಿ ಮತ್ತು ನೆಮ್ಮದಿ ಪಡೆಯಲು ಸಾತ್ವಿಕ ಜೀವನ ನಡೆಸಬೇಕು. ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಸ್ಪರರನ್ನು ನಮ್ಮವರೇ ಎಂಬ ಭಾವನೆಯಿಂದ ಕಾಣಬೇಕು ಎಂದರು.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಮಾತನಾಡಿ, ಮಕ್ಕಳ ಮನಸ್ಸು ಹಸಿ ಮಣ್ಣಿನ ಗೋಡೆಯಂತಿದ್ದು, ಬಾಲ್ಯದಲ್ಲೇ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಲು ಸಾಧ್ಯ ಎಂದರು.

ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್ ಮಾತನಾಡಿ, ವಿದ್ಯಾರ್ಥಿಗಳು ತಂದೆ-ತಾಯಿ ಹಾಗೂ ಗುರು-ಹಿರಿಯರಿಗೆ ಗೌರವ ನೀಡಬೇಕು. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದರ ಜೊತೆಗೆ ರಸ್ತೆ ಸುರಕ್ಷತೆ ಹಾಗೂ ಕಾನೂನುಗಳ ಬಗ್ಗೆ ಅರಿವು ಹೊಂದಿ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕು ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನದ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ತಿನ ತಾಲೂಕು ಅಧ್ಯಕ್ಷ ರವಿರಾಜ್ ಚಾರ್ಮಾಡಿ, ಉಜಿರೆ ವಲಯ ಅಧ್ಯಕ್ಷೆ ಪುಷ್ಪಾವತಿ ಶೆಟ್ಟಿ, ಸೇವಾ ಪ್ರತಿನಿಧಿಗಳಾದ ತಾರಾನಾಥ್, ರೇಷ್ಮಾ, ಪ್ರಭಾ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಶಿಕ್ಷಕ ಕಿರಣ್ ಸ್ವಾಗತಿಸಿದರು. ಐಶ್ವರ್ಯ ವಂದಿಸಿದರು. ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *