ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪದ ಮೇರೆಗೆ 48 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ಸುಮಾರು 1.93 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ಪುದು ಗ್ರಾಮದ ಅಮ್ಮೆಮ್ಮಾರ್ ಮೂಲದ, ಪ್ರಸ್ತುತ ಫರಂಗಿಪೇಟೆಯ ಟಿ.ಕೆ. ಫ್ಲ್ಯಾಟ್‌ನಲ್ಲಿ ವಾಸಿಸುತ್ತಿರುವ ಅಶ್ರಫ್ ಅಲಿಯಾಸ್ ಮೊಹಮ್ಮದ್ ಅಶ್ರಫ್ (48) ಎಂದು ಗುರುತಿಸಲಾಗಿದೆ. ಕಲ್ಲಿಗೆ ಗ್ರಾಮದ ಬ್ರಹ್ಮರಕೂಟ್ಲು ಟೋಲ್ ಗೇಟ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಅಶ್ರಫ್‌ನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಲಾಗಿದೆ.

ಆರೋಪಿಯ ಪ್ಯಾಂಟ್ ಜೇಬಿನಲ್ಲಿ ಬಿಳಿ ಬಣ್ಣದ ಪುಡಿ ಹೊಂದಿದ್ದ ನಾಲ್ಕು ಪ್ಯಾಕೆಟ್‌ಗಳು ಹಾಗೂ ಸ್ಕೂಟರ್ನ ಸೀಟಿನ ಅಡಿಯಲ್ಲಿ ಐದು ಪ್ಯಾಕೆಟ್‌ಗಳು ಪತ್ತೆಯಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಇವು ಆಂಫಿಟಮೈನ್ ಅಥವಾ ಮೆಥಾಂಫಿಟಮೈನ್ ಮಾದರಿಯ ಮಾದಕ ದ್ರವ್ಯಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮಾದಕ ವಸ್ತುಗಳ ಜೊತೆಗೆ ಎರಡು ಮೊಬೈಲ್ ಫೋನ್‌ಗಳು, 1,870 ರೂ. ನಗದು, ಡೆಬಿಟ್ ಕಾರ್ಡ್, ಎಂಟು ಖಾಲಿ ಜಿಪ್‌ಲಾಕ್ ಕವರ್‌ಗಳು, ತೂಕದ ಯಂತ್ರ ಹಾಗೂ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 1.93 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


