Breaking
10 Oct 2026, Sat

ಅ.18ರಂದು ಕಾಸರಗೋಡಿನಲ್ಲಿ ‘ದಸರಾ ರಾಷ್ಟ್ರೀಯ ಕವಿಸಮ್ಮೇಳನ-2026’

ಕಾಸರಗೋಡು: ಕನ್ನಡ ಭವನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಆಶ್ರಯದಲ್ಲಿ ‘ಕಾಸರಗೋಡು ದಸರಾ ರಾಷ್ಟ್ರೀಯ ಕವಿಸಮ್ಮೇಳನ-2026’ ಅ.18ರಂದು ಬೆಳಗ್ಗೆ 11 ಗಂಟೆಗೆ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ದುರ್ಗಾಂಬಾ ವೇದಿಕೆಯಲ್ಲಿ ನಡೆಯಲಿದೆ.

ಸಮ್ಮೇಳನದ ಸರ್ವಾಧ್ಯಕ್ಷ ಬೆಂಗಳೂರಿನ ಬಿ. ಶ್ರೀನಿವಾಸ ಬಹದ್ದೂರ್ ಅವರನ್ನು ಬೆಳಗ್ಗೆ 10.30ಕ್ಕೆ ಕನ್ನಡ ಮೆರವಣಿಗೆಯ ಮೂಲಕ ಸ್ವಾಗತಿಸಲಾಗುವುದು. ಮೆರವಣಿಗೆಯನ್ನು ಮೈಸೂರಿನ ವೈದ್ಯ ವಾರ್ತಾ ಪತ್ರಿಕೆಯ ನಿರ್ದೇಶಕ ಜೆ.ಪಿ. ಅರಸ್ ಉದ್ಘಾಟಿಸಲಿದ್ದಾರೆ.

ಬಹದ್ದೂರ್ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರೂ, ಅರಸು ಜನಾಂಗದ ಪ್ರಮುಖರೂ ಆಗಿರುವ ಬಿ. ಶ್ರೀನಿವಾಸ ಬಹದ್ದೂರ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ.

ಕನ್ನಡ ಭವನದ ಸ್ಥಾಪಕ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಸ್ಥಾಪಕ ಡಾ. ವಾಮನ್ ರಾವ್ ಬೇಕಲ್ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಮೈಸೂರಿನ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ, ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್. ಅರಸ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಮೈಸೂರಿನ ಖ್ಯಾತ ಕವಿ, ಸಾಹಿತಿ ಡಾ. ಜಯಪ್ಪ ಹೊನ್ನಾಳಿ (ಜಯಕವಿ) ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಖ್ಯಾತ ಕವಿ, ಹಿರಿಯ ವೈದ್ಯ ಡಾ. ಸುರೇಶ್ ನೆಗಳಗುಳಿ, ಕರ್ನಾಟಕ ಸರಕಾರದ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಪುರಸ್ಕೃತ ಕೃತಿಕಾರ್ತಿ ಸೀತಾಲಕ್ಷ್ಮಿ ವರ್ಮ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಮೈಸೂರಿನ ಕವಿ ಹಾಗೂ ಸಂಘಟಕ ಡಾ. ತ್ಯಾಗರಾಜ್ ಟಿ., ಕಥಾಬಿಂಧು ಪ್ರಕಾಶನದ ಸ್ಥಾಪಕ ಸಂಚಾಲಕ ಪಿ.ವಿ. ಪ್ರದೀಪ್ ಕುಮಾರ್ ಮತ್ತು ಪತ್ರಕರ್ತ, ಸಾಹಿತ್ಯ ಸಂಘಟಕ ಜಯಾನಂದ ಪೆರಾಜೆ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಮ್ಮೇಳನದಲ್ಲಿ ‘ಕಾಸರಗೋಡು ದಸರಾ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ-2026’ ಹಾಗೂ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ-2026’ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಕಾರ್ಯಕ್ರಮಕ್ಕೆ ಕನ್ನಡ ಭವನದ ಸನತ್ ಕುಮಾರ್ ಕೆ.ಪಿ. ಮತ್ತು ಕಾರ್ತಿಕ್ ಕಾಸರಗೋಡು ಸಹಕಾರ ನೀಡಲಿದ್ದು, ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿಗೆ ಡಾ. ರಮಾನಂದ ಬನಾರಿ, ಶ್ರೀಕೃಷ್ಣಯ್ಯ ಅನಂತಪುರ, ಡಾ. ಪ್ರಭಾ ಶಾಸ್ತ್ರಿ, ಡಾ. ಸುರೇಶ್ ನೆಗಳಗುಳಿ, ಡಾ. ಟಿ. ತ್ಯಾಗರಾಜ್ ಮೈಸೂರು, ವಿ.ಬಿ. ಕುಳಮರ್ವ, ಗುಣಾಜೆ ರಾಮಚಂದ್ರ ಭಟ್, ಮಲ್ಲಿಕಾ ಜೆ. ರೈ ಗುಂಡ್ಯಡ್ಕ, ಡಾ. ಎಂ.ಡಿ. ಮುನಾಫ್ ಬೆಂಗಳೂರು, ನಾ. ಗಂಗಾಧರಪ್ಪ ಮೈಸೂರು, ವಿರಾಜ್ ಅಡೂರು, ಬಸವರಾಜ್ ಬಾಗೇವಾಡಿ ಮಠ, ಸತ್ಯವತಿ ಭಟ್ ಕೊಳ್ಳಪ್ಪು, ಡಾ. ಕೊಳಚಪ್ಪೆ ಗೋವಿಂದ ಭಟ್, ಪುಷ್ಪ ಪ್ರಸಾದ್ ಉಡುಪಿ, ಎಂ.ಎ. ಮುಸ್ತಫಾ ಬೆಳ್ಳಾರೆ ಸುಳ್ಯ ಮತ್ತು ಸಂದೇಶ್ ಜೋಸೆಫ್ ಕೊಡಗು ಆಯ್ಕೆಯಾಗಿದ್ದಾರೆ.

ಕವಿಗೋಷ್ಠಿಯಲ್ಲಿ ಕವನ ವಾಚಿಸುವ ಎಲ್ಲ ಕವಿಗಳಿಗೆ ‘ಕಾಸರಗೋಡು ದಸರಾ ಕವಿಸಾಧಕ ಪ್ರಶಸ್ತಿ-2026’ ನೀಡಿ ಗೌರವಿಸಲಾಗುವುದು. ವಿವಿಧ ಜಿಲ್ಲೆಗಳು ಹಾಗೂ ರಾಜ್ಯಗಳ 59 ಕವಿಗಳು ಈ ಕವಿಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮವನ್ನು ಬೆಂಗಳೂರಿನ ಗೊರೂರು ಪಂಕಜ ನಿರ್ವಹಿಸಲಿದ್ದು, ವಿರಾಜ್ ಅಡೂರು ಸ್ವಾಗತಿಸಲಿದ್ದಾರೆ. ಕವಿಗೋಷ್ಠಿಯನ್ನು ಪುಷ್ಪಾ ಪ್ರಸಾದ್ ಉಡುಪಿ ಮತ್ತು ರೇಖಾ ಸುಧೇಶ್ ರಾವ್ ಮಂಗಳೂರು ನಿರ್ವಹಿಸಲಿದ್ದಾರೆ. ವಸಂತ ಕೆರೆಮನೆ ವಂದನಾರ್ಪಣೆ ಸಲ್ಲಿಸಲಿದ್ದಾರೆ.

Leave a Reply

Your email address will not be published. Required fields are marked *