Breaking
12 Oct 2026, Mon

ಕಲ್ಲಡ್ಕದಲ್ಲಿ 16ರ ಬಾಲಕಿಯನ್ನು ಹಿಂಬಾಲಿಸಿದ ಆರೋಪ: ವ್ಯಕ್ತಿಯ ವಿರುದ್ಧ ಪೋಕ್ಸೋ ಪ್ರಕರಣ

ಬಂಟ್ವಾಳ: 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸಿದ ಆರೋಪದ ಮೇಲೆ 47 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ಪ್ರಕಾರ, ಕಳೆದ ಕೆಲವು ದಿನಗಳಿಂದ ಬಾಲಕಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ.

ಆಗಸ್ಟ್ 19ರ ಸಂಜೆ ಬಾಲಕಿ ಕಲ್ಲಡ್ಕ ಬಸ್ ನಿಲ್ದಾಣಕ್ಕೆ ಬಂದಾಗಲೂ ಅದೇ ವ್ಯಕ್ತಿ ತನ್ನನ್ನು ಗಮನಿಸುತ್ತಿರುವುದನ್ನು ಕಂಡು ಭಯಗೊಂಡು, ತಾಯಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ತೆರಳಿ ವಿಷಯ ತಿಳಿಸಿದ್ದಾಳೆ.

ಬಳಿಕ ಬಾಲಕಿಯ ತಾಯಿ ಹಾಗೂ ಕಚೇರಿ ಮಾಲೀಕರು ಬಸ್ ನಿಲ್ದಾಣದ ಬಳಿ ತೆರಳಿದಾಗ ಆರೋಪಿತ ವ್ಯಕ್ತಿ ಅಲ್ಲಿಯೇ ಇದ್ದ ಎನ್ನಲಾಗಿದೆ. ಆತನನ್ನು ವಿಚಾರಿಸಿದಾಗ ತನ್ನ ಹೆಸರು ಜಯಂತ್ ಎಂದು ತಿಳಿಸಿ ಅಲ್ಲಿಂದ ತೆರಳಿದ್ದಾನೆ.

ಈ ಸಂಬಂಧ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ಪಟ್ಟಣ ಪೊಲೀಸರು ಅಪರಾಧ ಸಂಖ್ಯೆ 116/2026ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 78 ಹಾಗೂ ಪೋಕ್ಸೋ ಕಾಯ್ದೆ, 2012ರ ಸೆಕ್ಷನ್ 12ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ತನಿಖೆಯ ಬಳಿಕ ಬಂಟ್ವಾಳದ ಸರಪಾಡಿ ನಿವಾಸಿ ಎಂದು ಗುರುತಿಸಲಾದ ಜಯಂತ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *