Breaking
12 Oct 2026, Mon

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ VISION–2026 ವ್ಯಕ್ತಿತ್ವ ವಿಕಸನ ಶಿಬಿರ

ಬಂಟ್ವಾಳ: ವ್ಯಕ್ತಿತ್ವ ವಿಕಸನ ಶಿಬಿರಗಳು ಯುವಜನರಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣ, ಶಿಸ್ತು ಹಾಗೂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇಂತಹ ಶಿಬಿರಗಳು ಯುವಕರಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಸಮಾಜಕ್ಕೆ ಮಾದರಿಯಾಗುವ ನಾಯಕರಾಗಿ ರೂಪುಗೊಳ್ಳಲು ನೆರವಾಗುತ್ತವೆ ಎಂದು ಯುವವಾಹಿನಿ ರಜತ ವರ್ಷದ ಅಧ್ಯಕ್ಷ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಹೇಳಿದರು.

ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ಅಕ್ಟೋಬರ್ 11ರಂದು ಬಿ.ಸಿ.ರೋಡಿನ ಗಾಣದಪಡ್ಪುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಯೋಜಿಸಲಾದ VISION–2026 ‘ಯುವಕರ ದೃಷ್ಟಿಕೋನ’ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.


ಯುವಕರು ತಮ್ಮಲ್ಲಿರುವ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಸಕಾರಾತ್ಮಕ ಚಿಂತನೆ ಹಾಗೂ ಉತ್ತಮ ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ನಾಯಕತ್ವವೆಂದರೆ ಕೇವಲ ಜವಾಬ್ದಾರಿ ನಿರ್ವಹಿಸುವುದಲ್ಲ; ತಂಡವನ್ನು ಒಗ್ಗೂಡಿಸಿ, ಎಲ್ಲರ ಅಭಿಪ್ರಾಯಗಳಿಗೆ ಗೌರವ ನೀಡಿ ಸಾಮೂಹಿಕ ಗುರಿ ಸಾಧಿಸುವ ಸಾಮರ್ಥ್ಯವೂ ಆಗಿದೆ. ಇಂತಹ ಶಿಬಿರಗಳು ಯುವಜನರಲ್ಲಿ ಸವಾಲುಗಳನ್ನು ಎದುರಿಸುವ ಮನೋಬಲ, ಸಮಯಪಾಲನೆ, ಸಂಘಟನಾ ಕೌಶಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತವೆ ಎಂದು ತಿಳಿಸಿದರು. ಉದ್ಯಮಿ ಲೋಕೇಶ್ ಸುವರ್ಣ ಜಕ್ರಿಬೆಟ್ಟು ಅವರು ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.


ಯುವಕರ ಕನಸುಗಳಿಗೆ ಸ್ಪಷ್ಟ ದಿಕ್ಕು ನೀಡುವ ವೇದಿಕೆ VISION–2026: ಸ್ಮಿತೇಶ್ ಎಸ್. ಬಾರ್ಯ
ವ್ಯಕ್ತಿತ್ವ ವಿಕಸನ ತರಬೇತುದಾರ ಸ್ಮಿತೇಶ್ ಎಸ್. ಬಾರ್ಯ ಮಾತನಾಡಿ, ಯುವವಾಹಿನಿ ಕೇವಲ ಒಂದು ಸಂಘಟನೆಯಲ್ಲ; ಯುವಕರ ಕನಸುಗಳಿಗೆ ರೆಕ್ಕೆ ನೀಡುವ, ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ವೇದಿಕೆಯಾಗಿದೆ. ಯುವಕರು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಆತ್ಮವಿಶ್ವಾಸದಿಂದ ಗುರಿಯತ್ತ ಮುನ್ನಡೆಯಬೇಕು ಎಂದರು.


ಯುವಕರ ಆಲೋಚನೆಗಳಿಗೆ ಹೊಸ ಶಕ್ತಿ ತುಂಬಿ, ಅವರ ಕನಸುಗಳಿಗೆ ಸ್ಪಷ್ಟ ದಿಕ್ಕು ನೀಡುವಲ್ಲಿ ಇಂತಹ ತರಬೇತಿ ಶಿಬಿರಗಳು ಮಹತ್ವದ ಪಾತ್ರ ವಹಿಸುತ್ತವೆ. ಯುವಜನರು ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿಕೊಂಡು ಅದನ್ನು ಸಾಧಿಸಲು ಶಿಸ್ತು, ಬದ್ಧತೆ ಹಾಗೂ ನಿರಂತರ ಪ್ರಯತ್ನವನ್ನು ಬೆಳೆಸಿಕೊಳ್ಳಬೇಕು. ಅವಕಾಶಗಳಿಗಾಗಿ ಕಾಯುವುದಕ್ಕಿಂತ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಂಡು ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಸೋಲುಗಳನ್ನು ಅಂತ್ಯವೆಂದು ಭಾವಿಸದೆ, ಅವುಗಳನ್ನು ಅನುಭವದ ಪಾಠಗಳಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.


ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ಕಿರಣ್ರಾಜ್ ಪೂಂಜರಕೋಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವ್ಯಕ್ತಿತ್ವ ವಿಕಸನ ನಿರ್ದೇಶಕ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ ಸ್ವಾಗತಿಸಿದರು. ಘಟಕದ ಕಾರ್ಯದರ್ಶಿ ಗೀತಾ ಜಗದೀಶ್ ವಂದಿಸಿದರು. ಕಿರಣ್ರಾಜ್ ಪೂಂಜರಕೋಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *