ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬೆಂದ್ರಾಳದಲ್ಲಿ ಬುಧವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ದಿನಸಿ ಅಂಗಡಿಯೊಂದು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಬೆಂದ್ರಾಳ ನಿವಾಸಿ ಶರೀಫ್ ಅವರ ಮಾಲೀಕತ್ವದ ಅಂಗಡಿಯಲ್ಲಿ ತಡರಾತ್ರಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಜ್ವಾಲೆಗಳು ಅಂಗಡಿ ಹಾಗೂ ಕಟ್ಟಡವನ್ನು ಆವರಿಸಿವೆ.

ವಿಷಯ ತಿಳಿದ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಮುಂದಾದರು. ಅವರ ಸಕಾಲಿಕ ಕಾರ್ಯಾಚರಣೆಯಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ಸಾಧ್ಯವಾಯಿತು.

ಆದರೆ, ಬೆಂಕಿಯ ತೀವ್ರತೆಗೆ ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ ಎಲ್ಲಾ ದಿನಸಿ ಸಾಮಗ್ರಿಗಳು, ಕಟ್ಟಡ ಹಾಗೂ ಸುಮಾರು ₹1 ಲಕ್ಷ ನಗದು ಸುಟ್ಟು ಭಸ್ಮವಾಗಿವೆ. ಘಟನೆಯಿಂದ ಒಟ್ಟು ₹5 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮಾಹಿತಿ ಪಡೆದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.


