ಮೂಲ್ಕಿ: ರಾಷ್ಟ್ರೀಯ ಹೆದ್ದಾರಿಯ ಬಪ್ಪನಾಡು ದೇವಸ್ಥಾನದ ಸಮೀಪ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಲಾರಿಯ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ಪ್ರಭುಲಿಂಗ ಜಿ. ಎಂದು ಗುರುತಿಸಲಾಗಿದೆ. ಅವರು ದಾವಣಗೆರೆ ಜಿಲ್ಲೆಯ ಅನಗೋಡು ಸಮೀಪದ ನಿವಾಸಿಯಾಗಿದ್ದು, ಎಲೆಕ್ಟ್ರೀಶಿಯನ್ ಆಗಿ ಕೆಲಸ ಮಾಡುತ್ತಿದ್ದರು.

ಮಂಗಳೂರಿನಿಂದ ಉಡುಪಿಯತ್ತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಹೆದ್ದಾರಿಯಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಸಮೀಪ ಬೈಕ್‌ನ ನಿಯಂತ್ರಣ ಕಳೆದುಕೊಂಡ ಸವಾರ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಈ ವೇಳೆ ಅದೇ ರಸ್ತೆಯಲ್ಲಿ ಸಂಚರಿಸುತ್ತಿದ್ದ ಲಾರಿಯ ಹಿಂಬದಿ ಚಕ್ರ ಅವರ ತಲೆಯ ಮೇಲೆ ಹರಿದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹ ಹಾಗೂ ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಿದರು. ಅಪಘಾತದಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದರೂ ಬಳಿಕ ಪೊಲೀಸರು ಸಂಚಾರವನ್ನು ಸುಗಮಗೊಳಿಸಿದರು.

ಈ ಸಂಬಂಧ ಲಾರಿಯ ಚಾಲಕ ಬಾದಾಮಿ ಮೂಲದ ಭೀಮಣ್ಣ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


