Breaking
20 Jun 2026, Sat

ಲಂಡನ್‌: ಎರಡು ಪ್ಯಾಸೆಂಜರ್ ರೈಲುಗಳ ಮುಖಾಮುಖಿ ಡಿಕ್ಕಿ; ಚಾಲಕ ಸಾವು, 80ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಲಂಡನ್: ಬ್ರಿಟನ್‌ನ ಲಂಡನ್ ನಗರದ ಉತ್ತರ ಭಾಗದಲ್ಲಿರುವ ಬೆಡ್‌ಫೋರ್ಡ್ ಸಮೀಪ ಶುಕ್ರವಾರ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಒಬ್ಬ ರೈಲು ಚಾಲಕ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಎರಡೂ ಪ್ಯಾಸೆಂಜರ್ ರೈಲುಗಳು ಲಂಡನ್‌ನ ಸೇಂಟ್ ಪ್ಯಾಂಕ್ರಾಸ್ ನಿಲ್ದಾಣದತ್ತ ದಕ್ಷಿಣ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಜೂನ್ 19ರ ಶುಕ್ರವಾರ ಸಂಜೆ ಸುಮಾರು 5:15ರ ವೇಳೆಗೆ ಬೆಡ್‌ಫೋರ್ಡ್ ಹೊರವಲಯದಲ್ಲಿ ಪರಸ್ಪರ ಡಿಕ್ಕಿ ಹೊಡೆದಿವೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ತುರ್ತು ಸೇವಾ ಸಿಬ್ಬಂದಿ, ಅಗ್ನಿಶಾಮಕ ದಳ, ಅಂಬುಲೆನ್ಸ್ ತಂಡಗಳು ಹಾಗೂ ಏರ್ ಅಂಬುಲೆನ್ಸ್ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಘಟನೆಯಲ್ಲಿ ರೈಲು ಚಾಲಕ ಮೃತಪಟ್ಟಿದ್ದು, ಹಲವಾರು ಪ್ರಯಾಣಿಕರು ಮತ್ತು ಸಿಬ್ಬಂದಿ ಗಾಯಗೊಂಡಿದ್ದಾರೆ.

ರೈಲ್ವೆ, ಸಮುದ್ರ ಮತ್ತು ಸಾರಿಗೆ ಕಾರ್ಮಿಕರ ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಡ್ಡಿ ಡೆಂಪ್ಸಿ ಮೃತ ವ್ಯಕ್ತಿ ರೈಲು ಚಾಲಕರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಘಟನೆಯ ಕುರಿತು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಅಪಘಾತದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯಿಂದಾಗಿ ಆ ಪ್ರದೇಶದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *