Breaking
27 Oct 2026, Tue

ಅಸ್ಸಾಂನಲ್ಲಿ ಭೀಕರ ಗುಂಡಿನ ದಾಳಿ: ಹೋಟೆಲ್ ಮಾಲಕಿ ಸೇರಿ ಐವರು ಮೃತ್ಯು

ಗುವಾಹಟಿ: ಅಸ್ಸಾಂನ ರಾಜಧಾನಿ ಗುವಾಹಟಿಯ ಉಲುಬಾರಿ ಪ್ರದೇಶದ ಬೋರಾ ಸರ್ವಿಸ್ ಸಮೀಪದ ಹೋಟೆಲ್ ಬಳಿ ಸೋಮವಾರ ರಾತ್ರಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಹೋಟೆಲ್ ಮಾಲಕಿ ಹಾಗೂ ಆಕೆಯ ಪುತ್ರ ಸೇರಿದಂತೆ ಐವರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಘನಕಾಂತ ಗೊಗೊಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ರಾತ್ರಿ ಸುಮಾರು 9 ಗಂಟೆಗೆ ಈ ಘಟನೆ ನಡೆದಿದೆ. ಹೋಟೆಲ್‌ನ ಗುತ್ತಿಗೆ ಒಪ್ಪಂದ ಹಾಗೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹೋಟೆಲ್ ಮಾಲೀಕರ ಕಡೆಯವರು ಮತ್ತು ಗುತ್ತಿಗೆ ಪಡೆದವರ ನಡುವೆ ವಾಗ್ವಾದ ನಡೆದಿದ್ದು, ಇದೇ ಘಟನೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಗುವಾಹಟಿ ಪೊಲೀಸ್ ಕಮಿಷನರ್ ಪಾರ್ಥ ಸಾರಥಿ ಮಹಂತ ಅವರ ಮಾಹಿತಿ ಪ್ರಕಾರ, ಗುಂಡಿನ ದಾಳಿಗೆ ಬಳಸಲಾಗಿದೆ ಎನ್ನಲಾದ ಶಸ್ತ್ರಾಸ್ತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೃತಪಟ್ಟ ಐವರಲ್ಲಿ ನಾಲ್ವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಮತ್ತೊಬ್ಬ ಮೃತ ವ್ಯಕ್ತಿ ಹಾಗೂ ಗಾಯಗೊಂಡಿರುವ ವ್ಯಕ್ತಿ ಅದೇ ಗ್ರಾಮದವರು ಎಂದು ತಿಳಿದುಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣದ ಕುರಿತು ತನಿಖೆ ಚುರುಕುಗೊಳಿಸಿದ್ದಾರೆ. ಹೋಟೆಲ್ ಗುತ್ತಿಗೆ ಒಪ್ಪಂದದ ವಿವಾದ, ಆಸ್ತಿ ಸಂಬಂಧಿತ ಕಲಹ ಹಾಗೂ ವೈಯಕ್ತಿಕ ದ್ವೇಷದ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.

Leave a Reply

Your email address will not be published. Required fields are marked *