Breaking
20 Jun 2026, Sat

ಕೋಡಿಕನ್ಯಾಣ ಕಡಲತೀರದಲ್ಲಿ ದುರಂತ: ಪ್ರವಾಸಕ್ಕೆ ಬಂದ ಯುವಕ ಸಮುದ್ರದಲ್ಲಿ ಮುಳುಗಿ ಸಾವು

ಉಡುಪಿ: ಕೋಟ ಹೋಬಳಿಯ ಕೋಡಿಕನ್ಯಾಣ ಕಡಲತೀರದಲ್ಲಿ ಪ್ರವಾಸಕ್ಕೆಂದು ಬಂದಿದ್ದ ಯುವಕ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಮೃತರನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿ ನಿಖಿಲ್ ಕುಮಾರ್ (32) ಎಂದು ಗುರುತಿಸಲಾಗಿದೆ. ಅವರು ಖಾಸಗಿ ಕಂಪೆನಿಯಲ್ಲಿ ಟೀಮ್ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು.

ಮಾಹಿತಿಯ ಪ್ರಕಾರ, ಬೆಂಗಳೂರಿನಿಂದ ಒಟ್ಟು 9 ಮಂದಿ ಯುವಕರ ತಂಡ ಕರಾವಳಿ ಪ್ರವಾಸದ ಉದ್ದೇಶದಿಂದ ಕೋಡಿಕನ್ಯಾಣಕ್ಕೆ ಆಗಮಿಸಿ ಖಾಸಗಿ ರೆಸಾರ್ಟ್‌ನಲ್ಲಿ ತಂಗಿತ್ತು. ಬೆಳಗ್ಗೆ ನಾಲ್ವರು ಸಮುದ್ರಕ್ಕೆ ಇಳಿದು ಸ್ನಾನ ಮಾಡುತ್ತಿದ್ದ ವೇಳೆ ನಿಖಿಲ್ ಅಲೆಗಳ ತೀವ್ರತೆಗೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.

ಜೊತೆಯಲ್ಲಿದ್ದ ಸ್ನೇಹಿತರು ಕೂಗಿಕೊಂಡ ತಕ್ಷಣ ಸ್ಥಳೀಯ ಕೈರಂಪಣಿ ಬಲೆ ಮೀನುಗಾರರು ದೋಣಿಯ ಮೂಲಕ ತೆರಳಿ ಯುವಕನನ್ನು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ. ಬಳಿಕ ಜೀವನ್ ಮಿತ್ರ ಆ್ಯಂಬುಲೆನ್ಸ್ ಸಿಬ್ಬಂದಿ ನಾಗರಾಜ್ ಪುತ್ರನ್ ಹಾಗೂ ಕಿಶೋರ್ ಶೆಟ್ಟಿ ಅವರು ಸ್ಥಳೀಯರ ಸಹಕಾರದೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಿಖಿಲ್ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆದರೆ ವೈದ್ಯರು ಪರೀಕ್ಷಿಸಿ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕೋಟ ಪೊಲೀಸ್ ಠಾಣೆಯ ಉಪನಿರೀಕ್ಷಕ ಪ್ರವೀಣ್ ಕುಮಾರ್ ನೇತೃತ್ವದ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.

ಕುತೂಹಲಕಾರಿ ವಿಷಯವೆಂದರೆ, ತಂಡ ಗುರುವಾರ ರಾತ್ರಿ ಕೋಡಿಕನ್ಯಾಣಕ್ಕೆ ಆಗಮಿಸಿ ಗೂಗಲ್‌ನಲ್ಲಿ ಹುಡುಕಿ ರೆಸಾರ್ಟ್ ಬುಕ್ ಮಾಡಿಕೊಂಡಿತ್ತು. ಶುಕ್ರವಾರ ಉಡುಪಿ ಜಿಲ್ಲೆಯ ವಿವಿಧ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸುವ ಯೋಜನೆ ಹೊಂದಿದ್ದರು. ಆದರೆ ಪ್ರವಾಸ ದುರಂತದಲ್ಲಿ ಅಂತ್ಯಗೊಂಡಿದೆ.

Leave a Reply

Your email address will not be published. Required fields are marked *