ಕಾರ್ಕಳ: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಖಾಸಗಿ ಹೋಟೆಲ್ನಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಜೂಜಾಟ ಅಡ್ಡೆಯ ಮೇಲೆ ಕಾರ್ಕಳ ಪಟ್ಟಣ ಪೊಲೀಸರು ದಾಳಿ ನಡೆಸಿ, ಆರು ಮಂದಿಯನ್ನು ಬಂಧಿಸಿದ್ದಾರೆ.

ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಕಾರ್ಕಳ ಪಟ್ಟಣ ಪೊಲೀಸ್ ಠಾಣೆಯ ಸಬ್-ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ತಂಡ ಹೋಟೆಲ್ ಮೇಲೆ ದಾಳಿ ನಡೆಸಿದ ವೇಳೆ, ಜೂಜಾಟದಲ್ಲಿ ತೊಡಗಿದ್ದ ಸುಜೀತ್, ಅಭಿಮನ್ಯು, ಮಹೇಶ್, ಧೀರಜ್, ನರೇಶ್ ಕುಮಾರ್ ಹಾಗೂ ಪ್ರಶಾಂತ್ ಅವರನ್ನು ಬಂಧಿಸಲಾಯಿತು.

ಇದೇ ವೇಳೆ ಯಶೋಧರ, ನೂರ್ ಮೊಹಮ್ಮದ್, ರವಿ ಶೆಟ್ಟಿ ಹಾಗೂ ಸತೀಶ್ ಎಂಬ ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಯ ವೇಳೆ ಜೂಜಾಟಕ್ಕೆ ಬಳಸಲಾಗುತ್ತಿದ್ದ ₹16,350 ನಗದು, ಇಸ್ಪೀಟು ಎಲೆಗಳು ಹಾಗೂ ಒಟ್ಟು ₹17,000 ಮೌಲ್ಯದ ಏಳು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಜೂಜಾಟಕ್ಕಾಗಿ ಬಳಸಲಾಗುತ್ತಿದ್ದ ಸುಮಾರು ₹10,500 ಮೌಲ್ಯದ ಕುರ್ಚಿಗಳು ಸೇರಿದಂತೆ ಇತರೆ ಪೀಠೋಪಕರಣಗಳನ್ನೂ ಜಪ್ತಿ ಮಾಡಲಾಗಿದೆ.

ಈ ಸಂಬಂಧ ಕಾರ್ಕಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪರಾರಿಯಾಗಿರುವ ಆರೋಪಿಗಳು ಹಾಗೂ ಹೋಟೆಲ್ ಮಾಲೀಕರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


