ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ನಾಳೆ ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವ್ಯಾಪಕ ಸಿದ್ಧತೆ ಕೈಗೊಂಡಿದ್ದು, ಅದರ ಭಾಗವಾಗಿ ಇಂದು ದೇಶಾದ್ಯಂತ ಮಾಕ್ ಡ್ರಿಲ್ (ಅಣುಕು ಕಾರ್ಯಾಚರಣೆ) ನಡೆಸುತ್ತಿದೆ.

ದೇಶದ 551 ನಗರಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಡೆಯುವ ಈ ಅಭ್ಯಾಸದಲ್ಲಿ ಪ್ರಶ್ನೆಪತ್ರಿಕೆ ವಿತರಣೆ, ಉತ್ತರ ಪತ್ರಿಕೆಗಳ ಸಂಗ್ರಹಣೆ ಹಾಗೂ ಸಾಗಣೆ ಸೇರಿದಂತೆ ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಪರೀಕ್ಷಿಸಲಾಗುತ್ತಿದೆ.

ನಾಳೆಯ ಮರುಪರೀಕ್ಷೆಗಾಗಿ ದೇಶದಾದ್ಯಂತ 5,500ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜಿಲ್ಲಾಡಳಿತ, ರಾಜ್ಯ ಪೊಲೀಸ್ ಪಡೆಗಳು ಹಾಗೂ ಕೇಂದ್ರ ಸರ್ಕಾರದ ವಿಶೇಷ ಭದ್ರತಾ ತಂಡಗಳನ್ನು ಒಳಗೊಂಡ ಮೂರು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ಸುಮಾರು 2.5 ಲಕ್ಷ ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜನೆಯಾಗಲಿದ್ದು, 15,000ಕ್ಕೂ ಹೆಚ್ಚು ಅರೆಸೇನಾ ಸಿಬ್ಬಂದಿ ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆ ಹಾಗೂ ಪರೀಕ್ಷೆಯ ಬಳಿಕ ಉತ್ತರ ಪತ್ರಿಕೆಗಳನ್ನು ಹಿಂದಿರುಗಿಸುವ ಕಾರ್ಯ ನಿರ್ವಹಿಸಲಿದ್ದಾರೆ.

ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆಗಾಗಿ 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳು ಮತ್ತು 15,000 ಸಿಗ್ನಲ್ ಜಾಮರ್‌ಗಳನ್ನು ಅಳವಡಿಸಲಾಗಿದೆ. ಎನ್‌ಟಿಎ ಕೇಂದ್ರ ಕಚೇರಿ ಹಾಗೂ ದೇಶದ ವಿವಿಧ ಭಾಗಗಳಲ್ಲಿನ ಕಂಟ್ರೋಲ್ ರೂಮ್‌ಗಳಿಂದ ಪರೀಕ್ಷಾ ಪ್ರಕ್ರಿಯೆಯ ಮೇಲೆ ನೈಜ ಸಮಯದಲ್ಲಿ ನಿಗಾ ವಹಿಸಲಾಗುವುದು.


