ಪಡುಬಿದ್ರಿ: ಕಂಬಳ ಆಯೋಜನೆಗೆ ರಾಜ್ಯ ಸರ್ಕಾರವು ಪ್ರತೀ ಬಜೆಟ್ನಲ್ಲಿ ₹5 ಕೋಟಿ ಅನುದಾನ ಮೀಸಲಿಡುವ ಭರವಸೆ ನೀಡಿದೆ ಎಂದು ಡಾ| ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಅವರ ಪ್ರಕಾರ, ಈ ಬಾರಿ ಮೈಸೂರು ದಸರಾ ಕಾರ್ಯಕ್ರಮದ ಅಂಗವಾಗಿ ಕಂಬಳ ನಡೆಸುವ ಬಗ್ಗೆ ಸರ್ಕಾರ ವಿಶೇಷ ಆಸಕ್ತಿ ತೋರಿದೆ. ಮುಂದಿನ ದಿನಗಳಲ್ಲಿ KMF ಪ್ರಾಯೋಜಕತ್ವದಲ್ಲಿ ಕಂಬಳ ಆಯೋಜಿಸಿ ರೈತರಿಗೆ ಪ್ರೋತ್ಸಾಹ ಹಾಗೂ ಪ್ರಚಾರ ನೀಡುವ ಯೋಜನೆಯೂ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

ಕಂಬಳಕ್ಕೆ ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಮೂಲಕ ಹೆಚ್ಚಿನ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜೊತೆಗೆ ಕಂಬಳ ಭವನ ನಿರ್ಮಾಣಕ್ಕೆ ಸರ್ಕಾರಿ ಜಾಗ ಮಂಜೂರು, ತರಬೇತಿ ಕೇಂದ್ರ ಸ್ಥಾಪನೆಗೆ ಕ್ರೀಡಾ ಇಲಾಖೆಯ ಸಹಭಾಗಿತ್ವ ಮತ್ತು ರಾಜ್ಯ ಕಂಬಳ ಎಸೋಸಿಯೇಶನ್ಗೆ ವಿಶೇಷ ಸ್ಥಾನಮಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಇದೇ ವೇಳೆ, ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸಿದ್ಧತೆ ಕುರಿತು ಜೂನ್ 20ರಂದು ಮೈಸೂರು ಡಿಸಿ ಕಚೇರಿ ಸಭಾಂಗಣದಲ್ಲಿ ವಿಶೇಷ ಸಭೆ ನಡೆಯಲಿದೆ. ಸಭೆಗೆ ರಾಜ್ಯ ಕಂಬಳ ಎಸೋಸಿಯೇಶನ್ನ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕಂಗಿನಮನೆ ಹಾಗೂ ಖಜಾಂಚಿ ಲೋಕೇಶ್ ಶೆಟ್ಟಿ ಮುಚ್ಚೂರು ನೇತೃತ್ವದ ನಿಯೋಗ ಮೈಸೂರಿಗೆ ತೆರಳಿದೆ ಎಂದು ಮಾಹಿತಿ ನೀಡಲಾಗಿದೆ.

