Breaking
20 Jun 2026, Sat

ಸ್ನೇಹಾಲಯದ ಸೇವಾ ಕಾರ್ಯಗಳಿಗೆ ಬೆಂಬಲವಾಗಿ ಜೂ.21ರಂದು ಸಂಗೀತ ರಸಮಂಜರಿ

ಮಂಗಳೂರು: ಮಾನಸಿಕ ಅಸ್ವಸ್ಥರ ರಕ್ಷಣೆ, ಆರೈಕೆ, ಚಿಕಿತ್ಸೆ ಹಾಗೂ ಪುನರ್ವಸತಿ ಕಾರ್ಯಗಳಲ್ಲಿ ತೊಡಗಿರುವ ಸ್ನೇಹಾಲಯ ಚ್ಯಾರಿಟೆಬಲ್ ಟ್ರಸ್ಟ್ (ನೋಂ.), ಬಾಚಳಿಕೆ-ಪಾವೂರು, ಮಂಜೆಶ್ವರ ಸಂಸ್ಥೆಯು ತನ್ನ ವಿವಿಧ ಮಾನವೀಯ ಯೋಜನೆಗಳಿಗೆ ನೆರವು ಸಂಗ್ರಹಿಸುವ ಉದ್ದೇಶದಿಂದ ಜೂನ್ 21ರಂದು ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿದೆ.

2009ರಿಂದ ನಿರಂತರ ಸೇವೆ ಸಲ್ಲಿಸುತ್ತಿರುವ ಸ್ನೇಹಾಲಯವು ಕಳೆದ 17 ವರ್ಷಗಳಲ್ಲಿ 1,750ಕ್ಕೂ ಹೆಚ್ಚು ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ, ಚಿಕಿತ್ಸೆ ನೀಡಿ, ಅವರ ಕುಟುಂಬಗಳೊಂದಿಗೆ ಪುನರ್ಮಿಲನಗೊಳಿಸಿ ಪುನರ್ವಸತಿ ಕಲ್ಪಿಸಿದೆ. ಈ ಮೂಲಕ ಮಂಗಳೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಜನಮೆಚ್ಚುಗೆ ಪಡೆದ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ಪ್ರಸ್ತುತ ಸಂಸ್ಥೆಯಲ್ಲಿ 375ಕ್ಕೂ ಅಧಿಕ ನಿವಾಸಿಗಳು ಆಶ್ರಯ ಪಡೆದಿದ್ದು, ಅವರ ಆರೈಕೆ, ಮನೋರೋಗ ಚಿಕಿತ್ಸೆ, ಡಿ-ಅಡಿಕ್ಷನ್ ಸೇವೆಗಳು, ಶಿಕ್ಷಣ ಹಾಗೂ ಇತರ ಕಲ್ಯಾಣ ಯೋಜನೆಗಳಿಗಾಗಿ ನಿಧಿ ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮಂಗಳೂರಿನ ಟೌನ್ ಹಾಲ್‌ನಲ್ಲಿ ಜೂನ್ 21ರಂದು ಸಂಜೆ 6 ಗಂಟೆಗೆ ನಡೆಯಲಿರುವ ಈ ಸಂಗೀತ ರಸಮಂಜರಿಯ ರೂವಾರಿಯಾಗಿ ಖ್ಯಾತ ಉದ್ಯಮಿ ಹಾಗೂ ಸಂಗೀತಗಾರ ಕೆವಿನ್ ಮಿಸ್ಕಿತ್ ಕಾರ್ಯನಿರ್ವಹಿಸುತ್ತಿದ್ದಾರೆ. ಗೀತರಚನೆಕಾರ, ಸಂಗೀತ ಸಂಯೋಜಕ ಹಾಗೂ ಗಾಯಕರಾಗಿರುವ ಅವರು ಆರು ಸಂಗೀತ ಆಲ್ಬಮ್‌ಗಳನ್ನು ನಿರ್ಮಿಸಿದ್ದು, ವಿಶ್ವದಾದ್ಯಂತ 53ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಅಮೆರಿಕಾ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಐರ್ಲೆಂಡ್, ಒಮಾನ್, ಬಹ್ರೈನ್ ಸೇರಿದಂತೆ ಹಲವು ದೇಶಗಳಲ್ಲಿ ಸಂಗೀತಾಸಕ್ತರ ಮೆಚ್ಚುಗೆ ಗಳಿಸಿದ್ದಾರೆ.

ಏಳು ವರ್ಷಗಳ ವಿರಾಮದ ಬಳಿಕ ಕೆವಿನ್ ಮಿಸ್ಕಿತ್ ಅದ್ಧೂರಿ ಪುನರಾಗಮನದೊಂದಿಗೆ ಮತ್ತೆ ಸಂಗೀತ ವೇದಿಕೆಗೆ ಮರಳುತ್ತಿದ್ದು, ಈ ಕಾರ್ಯಕ್ರಮದಿಂದ ಸಂಗ್ರಹವಾಗುವ ಸಂಪೂರ್ಣ ಧನಸಹಾಯವನ್ನು ಸ್ನೇಹಾಲಯದ ಮಾನವೀಯ ಸೇವಾ ಕಾರ್ಯಗಳಿಗೆ ಬಳಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಹಾಗೂ ಭಾಗವಹಿಸುವ ಮೂಲಕ ಸ್ನೇಹಾಲಯದ ಸೇವಾ ಕಾರ್ಯಗಳಿಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಜೋಸೆಫ್ ಕ್ರಾಸ್ತಾ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *