Breaking
5 Aug 2026, Wed

ಆನೆಗುಡ್ಡೆ ಬಳಿ ಭೀಕರ ಅಪಘಾತ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಸಾವು

ತೆಕ್ಕಟ್ಟೆ: ರಾಷ್ಟ್ರೀಯ ಹೆದ್ದಾರಿ–66ರ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಮಹಾದ್ವಾರದ ಸಮೀಪ ಕಾರೊಂದು ಸ್ಕೂಟರ್ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ.


ಮೃತರನ್ನು ಬ್ರಹ್ಮಾವರ ತಾಲೂಕಿನ ವಡ್ಡರ್ಸೆ ಎಂ.ಜಿ. ಕಾಲನಿ ನಿವಾಸಿ ಗಣೇಶ ದೇವಾಡಿಗ (37) ಎಂದು ಗುರುತಿಸಲಾಗಿದೆ.
ಮಾಹಿತಿಯಂತೆ, ಕುಂದಾಪುರದಿಂದ ಉಡುಪಿ ಕಡೆಗೆ ಅತಿವೇಗದಲ್ಲಿ ಚಲಿಸುತ್ತಿದ್ದ ಕಾರು, ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಸ್ಕೂಟರ್ಗೆ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಗಣೇಶ ದೇವಾಡಿಗ ಅವರ ತಲೆ ಹಾಗೂ ದೇಹಕ್ಕೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಕೊಟೇಶ್ವರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.


ಅಪಘಾತದ ಬಳಿಕ ಕಾರು ಸುಮಾರು 100 ಮೀಟರ್ಗಳಷ್ಟು ದೂರ ಸ್ಕೂಟರ್ ಅನ್ನು ಎಳೆದುಕೊಂಡು ಹೋಗಿ ರಸ್ತೆ ವಿಭಾಜಕದಲ್ಲಿದ್ದ ಕ್ರ್ಯಾಶ್ ಗಾರ್ಡ್ಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಪರಿಣಾಮ ಕಾರಿನ ಮುಂಭಾಗ ಹಾಗೂ ಸ್ಕೂಟರ್ ಎರಡೂ ಸಂಪೂರ್ಣ ಜಖಂಗೊಂಡಿವೆ.


ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನೂಪ್ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಮೃತ ಗಣೇಶ ದೇವಾಡಿಗ ಅವರು ಕುಂದಾಪುರದ ಖಾಸಗಿ ಹೋಟೆಲ್ನಲ್ಲಿ ಬಾಣಸಿಗರಾಗಿ ಕೆಲಸ ಮಾಡುತ್ತಿದ್ದು, ಕುಟುಂಬದ ಪ್ರಮುಖ ಆಧಾರವಾಗಿದ್ದರು. ಅವರು ಪತ್ನಿ, ತಂದೆ ಹಾಗೂ ತಾಯಿಯನ್ನು ಅಗಲಿದ್ದು, ಅವರ ನಿಧನ ಕುಟುಂಬದಲ್ಲಿ ದುಃಖದ ವಾತಾವರಣ ಸೃಷ್ಟಿಸಿದೆ.

Leave a Reply

Your email address will not be published. Required fields are marked *