Breaking
19 Sep 2026, Sat

ಉಳ್ಳಾಲದಲ್ಲಿ ಮೆಸ್ಕಾಂ ಲೈನ್‌ ಮ್ಯಾನ್‌ ಗೆ ವಿದ್ಯುತ್ ಆಘಾತ: ದುರಸ್ತಿ ವೇಳೆ ದುರ್ಮರಣ

ಮಂಗಳೂರು: ಉಳ್ಳಾಲ ತಾಲೂಕಿನ ಉಚ್ಚಿಲ ನಾಯಪಟ್ಟಣದಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ಕಾರ್ಯದ ವೇಳೆ ಮೆಸ್ಕಾಂ ಲೈನ್‌ ಮ್ಯಾನ್ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ದಾರುಣ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.


ಮೃತರನ್ನು ಪಿಲ್ಲಾರು ಅಂಬಿಕಾ ರಸ್ತೆ ನಿವಾಸಿ ಶೇಖ್ ಜಮೀರ್ (49) ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಉಚ್ಚಿಲ ನಾಯಪಟ್ಟಣದ ಟ್ರಾನ್ಸ್ಫಾರ್ಮರ್ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮೆಸ್ಕಾಂಗೆ ದೂರು ಬಂದಿತ್ತು. ದೂರಿನ ಮೇರೆಗೆ ಶೇಖ್ ಜಮೀರ್ ಹಾಗೂ ಅವರ ಸಹೋದ್ಯೋಗಿ ಸಂಗಪ್ಪ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯ ಆರಂಭಿಸಿದ್ದರು.


ಈ ವೇಳೆ GOS (ಗ್ರೂಪ್ ಆಪರೇಟೆಡ್ ಸ್ವಿಚ್) ಆಫ್ ಆಗಿದೆ ಎಂದು ಭಾವಿಸಿ ಜಮೀರ್ ಟ್ರಾನ್ಸ್ಫಾರ್ಮರ್ ಏರಿದ್ದರು. ಆದರೆ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿರದ ಕಾರಣ ಅವರಿಗೆ ತೀವ್ರ ವಿದ್ಯುತ್ ಆಘಾತ ಸಂಭವಿಸಿದ್ದು, ಅದರ ಪರಿಣಾಮ ಟ್ರಾನ್ಸ್ಫಾರ್ಮರ್ನಿಂದ ಕೆಳಗೆ ಬಿದ್ದಿದ್ದಾರೆ.


ಗಂಭೀರವಾಗಿ ಗಾಯಗೊಂಡ ಜಮೀರ್ ಅವರನ್ನು ತಕ್ಷಣ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.


ಮೃತ ಶೇಖ್ ಜಮೀರ್ ಅವರು ಪತ್ನಿ ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದು, ಅವರ ನಿಧನದಿಂದ ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ತೀವ್ರ ಶೋಕ ಮನೆಮಾಡಿದೆ.

Leave a Reply

Your email address will not be published. Required fields are marked *