ಉಪ್ಪಿನಂಗಡಿ: ಸಕಲೇಶಪುರದಿಂದ ಮಂಗಳೂರಿನತ್ತ ಅಗತ್ಯ ದಾಖಲೆಗಳಿಲ್ಲದೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಆಗಸ್ಟ್ 3ರಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ಮಠ ಸಮೀಪದ ರಾಷ್ಟ್ರೀಯ ಹೆದ್ದಾರಿ–75ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷ ತಪಾಸಣೆ ನಡೆಸಿದ ವೇಳೆ ಅನುಮಾನಾಸ್ಪದ ವಾಹನವನ್ನು ತಡೆದು ಪರಿಶೀಲಿಸಿದರು. ಈ ವೇಳೆ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳಿಗೆ ಅಗತ್ಯ ದಾಖಲೆಗಳು ಇಲ್ಲದಿರುವುದು ಪತ್ತೆಯಾಯಿತು.

ತಕ್ಷಣವೇ ಅಧಿಕಾರಿಗಳು ವಾಹನ ಹಾಗೂ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ವಶಪಡಿಸಿಕೊಂಡ ವಾಹನ ಮತ್ತು ಮರದ ದಿಮ್ಮಿಗಳ ಒಟ್ಟು ಮೌಲ್ಯ ಸುಮಾರು 10 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಹೆಚ್.ಪಿ. ರಾಘವೇಂದ್ರ, ಉಪ ವಲಯ ಅರಣ್ಯಾಧಿಕಾರಿ ವಿನಯ್ ಕುಮಾರ್, ಗಸ್ತು ಅರಣ್ಯ ಪಾಲಕರಾದ ವಿನಯ ಚಂದ್ರ ಹಾಗೂ ದೀಕ್ಷಾ ಕೆ., ಚಾಲಕ ಕಿಶೋರ್ ಕುಮಾರ್ ಕೆ. ಭಾಗವಹಿಸಿದ್ದರು.

ಪ್ರಕರಣದ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಸಿ. ಅವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯಕ್ ಅವರ ನಿರ್ದೇಶನದಂತೆ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಹೆಚ್.ಪಿ. ರಾಘವೇಂದ್ರ ಅವರು ಮುಂದುವರಿಸಿದ್ದಾರೆ.


